ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನೆಯ ಪ್ರಯುಕ್ತ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ

Spread the love

ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನೆಯ ಪ್ರಯುಕ್ತ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ

ಉಡುಪಿ: ಜನವರಿ 6 ರಂದು ನೂತನವಾಗಿ ನಿರ್ಮಿಸಿರುವ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಪೂರ್ವಭಾವಿಯಾಗಿ ಬುಧವಾರ ಆಕರ್ಷಕವಾದ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.

ಮಲ್ಪೆಯ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿ ಹೊರೆ ಕಾಣಿಕೆ ಮೆರವಣಿಗೆಗೆ ವಿದ್ಯುಕ್ತವಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಚಾಲನೆ ನೀಡುವುದರ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಮಲ್ಪೆ ಹಾಗು ಉಡುಪಿಯ ಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಕಾಕತಾಳಿಯವೆಂಬಂತೆ ಇಂದು ಉಡುಪಿಯಲ್ಲಿ ಮುಂದಿನ ಎರಡು ವರ್ಷಗಳಿಗೆ ಪರ್ಯಾಯ ನಡೆಸಲು ಅಣಿಯಾಗುತ್ತಿರುವ ಪಲಿಮಾರು ಶ್ರೀಗಳು ಪುರಪ್ರವೇಶ ಮಾಡುತ್ತಿರುವ ಸಂದರ್ಭದಲ್ಲಿ ಸಮುದ್ರ ತಾರೆ ಎನಿಸಲ್ಪಟ್ಟ ವೆಲಂಕಣಿ ಮಾತೆಯ ಕಲ್ಮಾಡಿ ದೇವಾಲಯದ ಉದ್ಘಾಟನೆಗೆ ಹೊರೆಕಾಣಿಕೆ ಮೆರವಣಿಗೆ ಕೂಡ ಆಯೋಜನೆಯಾಗಿದೆ ಮಲ್ಪೆ ಸೌಹಾರ್ದದ ಊರಾಗಿದ್ದು, ಕಲ್ಮಾಡಿಯ ನೂತನ ಚರ್ಚು ಬೋಟಿನ ಆಕೃತಿಯಲ್ಲಿ ಅತೀ ಸುಂದರವಾಗಿ ನಿರ್ಮಾಣಗೊಂಡಿದ್ದು ಮೀನುಗಾರರ ಚರ್ಚು ಎಂಬ ಖ್ಯಾತಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಜೆರ್ರಿ ವಿನ್ಸೆಂಟ್ ಡಾಯಸ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ ಆಲ್ಬನ್ ಡಿಸೋಜಾ, ಅತಿಥಿ ಧರ್ಮಗುರುಗಳಾದ ವಂ ವಲೇರಿಯನ್ ಡಿಸಿಲ್ವಾ, ವಂ ರೆಜಿನಾಲ್ಡ್ ಪಿಂಟೊ, ವಂ. ಸ್ಟೀಫನ್, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾರ್ಮಿಸ್ ನೊರೊನ್ಹಾ, ನಗರಸಭಾ ಸದಸ್ಯ ನಾರಾಯಣ ಕುಂದರ್ ಉಪಸ್ಥಿತರಿದ್ದರು.

ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ವಂದಿಸಿದರು. ಲೆಸ್ಲಿ ಅರೋಜಾ ಕಾರ್ಯಕ್ರಮ ನಿರೂಪಿಸಿದರು.

ಮಲ್ಪೆ ಬಸ್ಸು ನಿಲ್ದಾಣದಿಂದ ಕಲ್ಮಾಡಿಯವರೆಗೆ ಸಾಗಿ ಬಂದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ನೂತನ ಕಲ್ಮಾಡಿ ಚರ್ಚಿನ ಸದಸ್ಯರು, ಸ್ಥಳೀಯ ಚರ್ಚುಗಳ ಸದಸ್ಯರು, ಹಿಂದೂ ಭಾಂಧವರು ಆಗಮಿಸಿ ಹೊರೆಕಾಣಿಕೆಯನ್ನು ಸಮರ್ಪಿಸಿದರು. ಹೊರೆ ಕಾಣಿಕೆಯಲ್ಲಿ ಸ್ಥಳೀಯ ಚರ್ಚಿನ ತಂಡವು ಅರೇಬಿಕ್ ಸಮುದಾಯದ ಉಡುಗೆ ಧರಿಸಿ ಒಂಟೆಯೊಂದಿಗೆ ಆಗಮಿಸಿದ್ದು ಸರ್ವರ ಗಮನ ಸೆಳೆಯಿತು.

ಹೊರೆ ಕಾಣಿಕೆಯಲ್ಲಿ ನಾಸಿಕ್ ಬ್ಯಾಂಡ್, ಹುಲಿವೇಷ, ಬೈಬಲ್ ಆದಾರಿತ ಟ್ಯಾಬ್ಲೊಗಳು, ಬ್ರಾಸ್ ಬ್ಯಾಂಡ್, ಬೋಟನ್ನು ಹೋಲುವ ಅಲಂಕೃತ ವೆಲಂಕಣಿ ಮಾತೆಯ ವಾಹನ ಗಮನ ಸೆಳೆಯಿತು.

 


Spread the love