ಕಲ್ಲಡ್ಕದಲ್ಲಿ ಗಲಭೆ : ನಾಲ್ಕು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಜಾರಿ
ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದ ಗಲಭೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲ್ಲೂಕುಗಳಲ್ಲಿ ಗುರುವಾರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ದಕ್ಷಿಣ ಕನ್ನಡ ಎಸ್ಪಿ ಭೂಷಣ್ ಜಿ. ಬೊರಸೆ ಅವರ ಶಿಫಾರಸಿನಂತೆ ನಾಲ್ಕು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮಂಗಳವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ನಿಷೇಧಾಜ್ಞೆ ನಡುವೆಯೇ ಮಂಗಳವಾರ ಮತ್ತೆ ಹಿಂಸಾಚಾರ ನಡೆದಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಎರಡು ಗುಂಪುಗಳ ನಡುವೆ ಸಂಜೆ ನಡೆದ ಘರ್ಷಣೆಯಲ್ಲಿ ಚೂರಿ ಇರಿತ ಮತ್ತು ಹಲ್ಲೆಯಿಂದ ಮೂವರು ಗಾಯಗೊಂಡಿದ್ದಾರೆ.
ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ, ರವಿ ಭಂಡಾರಿ ಮತ್ತು ಕಲ್ಲಡ್ಕ ನಿವಾಸಿ ಖಲೀಲ್ ಘಟನೆಯಲ್ಲಿ ಗಾಯಗೊಂಡವರು. ಘರ್ಷಣೆಯ ನಂತರ ನಡೆದ ಕಲ್ಲು ತೂರಾಟದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಕ್ಷಿತ್ ಗೌಡ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.