Home Mangalorean News Kannada News ಕಲ್ಲಡ್ಕರ ಶಾಲೆಗೆ ಅನುದಾನ ರದ್ದು, ಕ್ರೈಸ್ತರ ವೇದಿಕೆಯ ಫ್ರಾಂಕ್ಲಿನ್ ಮೊಂತೆರೊ ಖಂಡನೆ

ಕಲ್ಲಡ್ಕರ ಶಾಲೆಗೆ ಅನುದಾನ ರದ್ದು, ಕ್ರೈಸ್ತರ ವೇದಿಕೆಯ ಫ್ರಾಂಕ್ಲಿನ್ ಮೊಂತೆರೊ ಖಂಡನೆ

Spread the love

ಕಲ್ಲಡ್ಕರ ಶಾಲೆಗೆ ಅನುದಾನ ರದ್ದು, ಕ್ರೈಸ್ತರ ವೇದಿಕೆಯ ಫ್ರಾಂಕ್ಲಿನ್ ಮೊಂತೆರೊ ಖಂಡನೆ

ಮಂಗಳೂರು : ಶಿಕ್ಷಣವೆಂಬುವುದು ಗಗನ ಕುಸುಮವಾಗಿರುವ ಈ ಕಾಲದಲ್ಲಿ ಶಿಕ್ಷಣದ ಜೊತೆಗೆ ಸಾಮಾಜಿಕ ಬದ್ಧತೆ ಹಾಗೂ ರಾಷ್ಟ್ರೀಯತೆಗೆ ಒತ್ತು ನೀಡಿ ಗುರುಕುಲ ಮಾದರಿಯಲ್ಲಿ ಶಿಕ್ಷಣವನ್ನು ನೀಡುವುದರ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಸಂಸ್ಥೆಗಳು ಡಾ| ಕಲ್ಲಡ್ಕ ಪ್ರಭಾಕರ ಭಟ್‍ರವರ ಹಿರಿತನದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಎಕೈಕ ಕಾರಣಕ್ಕಾಗಿ ಡಾ| ಭಟ್‍ರವರ ಮೇಲೆ ತಮಗಿರುವ ದ್ವೇಷ ಸಾಧನೆಗಾಗಿ ಅಲ್ಲಿರುವ ವಿದ್ರ್ಯಾರ್ಥಿಗಳು ಕಳೆದ ಹತ್ತು ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಆದಾಯದಿಂದ ಪಡೆಯುತ್ತಿದ್ದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ನಿರ್ಬಂಧಿಸುವುದರ ಮೂಲಕ ರಾಜ್ಯ ಸರ್ಕಾರವು ನಿಷೇಧ ಹೇರಿ ಅಧಿಸೂಚನೆಯನ್ನು ಹೊರಡಿಸಿರುವುದು ಅತ್ಯಂತ ನೀಚ ಹಾಗೂ ಅಮಾನವೀಯ ಕೃತ್ಯ ಎಂದು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಉಗ್ರವಾಗಿ ಖಂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಮಾಡಲು ಅಸಾಧ್ಯವಾದಂತಂಹ ಅಸಮರ್ಥ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವೈಯಕ್ತಿಕ ದ್ವೇಷ ಸಾಧನೆಗಾಗಿ ಈ ರೀತಿಯ ಕೃತ್ಯಕ್ಕೆ ಕೈಹಾಕಿರುವುದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ಮಾತ್ರವಲ್ಲದೆ ಈ ಮೂಲಕ ಪ್ರಭಾಕರ್ ಭಟ್‍ರವರನ್ನು ಮಣಿಸಬಹುದು ಎಂಬ ಹುಂಬತನವನ್ನು ಪ್ರದರ್ಶಿಸಿರುವರು. ಶ್ರೀರಾಮ ವಿದ್ಯಾಕೇಂದ್ರ ಯಾವ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದೆ ಎಂಬುವುದಕ್ಕೆ ಅಲ್ಲಿ ನಡೆಯುವ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಒಂದು ಬಾರಿ ಭೇಟಿಕೊಟ್ಟು ಆ ಕಾರ್ಯಕ್ರಮವನ್ನು ವೀಕ್ಷಿಸಿದರೆ ಇಂತಹ ವ್ಯಕ್ತಿಗಳು ಈ ರೀತಿಯ ನೀಚ ಕೃತ್ಯಕ್ಕೆ ಕೈಹಾಕಲಾರರು ಎಂದು ವೇದಿಕೆಯ ಸ್ಥಾಪಕರಾದ ಫ್ರ್ಯಾಂಕ್ಲಿನ್ ಮೊಂತೆರೊರವರು ಸಚಿವರ ಈ ರೀತಿಯ ಮನೋಭಾವನೆಯನ್ನು ಅತ್ಯುಗ್ರವಾಗಿ ಖಂಡಿಸಿರುವರು.

 ಕನ್ನಡ ಮಾಧ್ಯಮ ಶಾಲೆಗಳು ವಿನಾಶದ ಅಂಚಿನಲ್ಲಿರುವ ಈ ಸಮಯದಲ್ಲಿ ಡಾ|  ಪ್ರಭಾಕರ್ ಭಟ್‍ರವರು ಯಾವುದೇ ಅಪೇಕ್ಷೆಯಿಲ್ಲದೆ ಸಮಾಜದ ಸಜ್ಜನ ಬಂಧುಗಳ ಸಹಕಾರದಿಂದ ಜಾತಿ-ಮತ-ಧರ್ಮದ ಭೇದವಿಲ್ಲದೆ ಬಡ ಹಾಗೂ ಅನಾಥ ವಿದ್ಯಾರ್ಥಿಗಳಿಗಾಗಿ ಕನ್ನಡ ಮಾಧ್ಯಮದಲ್ಲೇ ಕೇವಲ ಸರಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆಯುವುದರೊಂದಿಗೆ (ಅಶಕ್ತರಿಗೆ ಉಚಿತ) ಈ ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದ ಪುಣ್ಯದ ಕೆಲಸವಾಗಿರುತ್ತದೆ. ಸರಕಾರವು ಈ ರೀತಿಯ ಅಧಿಸೂಚನೆಯನ್ನು ಕೂಡಲೇ ಹಿಂಪಡೆದು ಬಡಮಕ್ಕಳ ವಿದ್ಯಾರ್ಜನೆಗೆ ಸಹಾಯವಾಗುವ ನಿರ್ಧಾರವನ್ನು ಕೈಗೊಳ್ಳಬೇಕು ತಪ್ಪಿದ್ದಲ್ಲಿ  ರಾಷ್ಟ್ರೀಯವಾದಿ ಸಂಘಟನೆಗಳ ಜೊತೆ ಸೇರಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಕೈಗೊಳ್ಳಬೇಕಾದಿತು ಎಂದು ಫ್ರ್ಯಾಂಕ್ಲಿನ್ ಮೊಂತೆರೊ ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.


Spread the love

Exit mobile version