ಕಲ್ಲಡ್ಕ ಪ್ರಭಾಕರ ಭಟ್ ಕುರಿತು ಸೂಕ್ತ ದಾಖಲೆ ಇದ್ದರೆ ಬಂಧಿಸಿ ; ಕುಮಾರ ಸ್ವಾಮಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಿದ್ದು, ಕಳೆದ ಬಾರಿ ಖುರೇಶಿ ಹಲ್ಲೆ ಪ್ರಕರಣವಾದರೆ ಈಗ ಕಲ್ಲಡ್ಕ ಗಲಾಟೆ ಪ್ರಕರಣ ನಡೆದಿದೆ. ಮುಸ್ಲಿಂ ಸಮುದಾಯ ಪವಿತ್ರ ರಂಜಾನ್ ತಿಂಗಳಿನಲ್ಲಿ ಇದ್ದು ಕಲ್ಲಡ್ಕದಲ್ಲಿ ಕಳೆದ ಒಂದು ವಾರದಿಂದ ಗಲಭೆ ನಡೆಯುತ್ತಿದ್ದು ಪೋಲಿಸರು ಮಹಿಳೆಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒಂದುವೇಳೆ ಸೂಕ್ತ ದಾಖಲೆ ಇದ್ದರೆ ಕಲ್ಲಡ್ಕ ಪ್ರಭಾರಕರ ಭಟ್ಟರನ್ನು ಬಂಧಿಸಲು ಸೂಚನೆ ನೀಡಲಿ. ಅದನ್ನು ಬಿಟ್ಟು ಯಾವುದೇ ದಾಖಲೆ ಇಲ್ಲದೆ ಪೋಲಿಸರಿಗೆ ಬಂಧಿಸಲು ಸೂಚನೆ ನೀಡುವುದು ಸರಿಯಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ.
ಅವರು ನಗರದ ಮೋತಿ ಮಹಲ್ ಹೋಟೆಲಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು. ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು ದಕ ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಎರಡು ಪಕ್ಷಗಳು ಕೂಡ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ಕಾರಣವಾಗುತ್ತಿವೆ.
ಜಿಲ್ಲೆಯ ರೈತರು ತಮ್ಮ ಬೆಳೆಗೆ ಸೂಕ್ತ ಬೆಂಬಲ ಬೆಲೆಯನ್ನು ಪಡೆಯುತ್ತಿಲ್ಲ. ರೈತರ ಉದ್ದಾರಕ್ಕೆ ಸಮಯ ನೀಡಲು ಎರಡು ಪಕ್ಷಗಳಿಗೂ ಅಪೇಕ್ಷೆ ಇಲ್ಲ. ಕಳೆದ ವಾರ ಮಂಗಳೂರಿನಲ್ಲಿ ಮಳೆಯ ನೀರು ರಸ್ತೆಯೆಲ್ಲಾ ಹರಿದಿದ್ದು ಚುನಾಯಿತ ಪ್ರತಿನಿಧಿಗಳು ಜನರ ರಕ್ಷಣೆಯ ಬಗ್ಗೆ ಚಿಂತಿಸುವುದರೊಂದಿಗೆ ಸಮಸ್ಯೆ ಪರಿಹಾರ ಮಾಡುವ ಕೆಲಸ ಮಾಡಬೇಕು ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಎಮ್ ಫಾರೂಕ್, ಬೋಜೆಗೌಡ, ಎಮ್ ವಿ ಸದಾಶಿವ, ವಸಂತ್ ಪೂಜಾರಿ, ಧನರಾಜ್, ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.