ಕಲ್ಸಂಕದಲ್ಲಿ ಅಳವಡಿಸಿರುವ ಬ್ಯಾರಿಕೇಡ್ ತೆರವುಗೊಳಿಸಿ – ಜಿಲ್ಲಾಡಳಿತಕ್ಕೆ ರಘುಪತಿ ಭಟ್ ಆಗ್ರಹ

Spread the love

ಕಲ್ಸಂಕದಲ್ಲಿ ಅಳವಡಿಸಿರುವ ಬ್ಯಾರಿಕೇಡ್ ತೆರವುಗೊಳಿಸಿ – ಜಿಲ್ಲಾಡಳಿತಕ್ಕೆ ರಘುಪತಿ ಭಟ್ ಆಗ್ರಹ

ಉಡುಪಿ: ಅಂಬಾಗಿಲು – ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ ರಸ್ತೆಗೆ ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ರಸ್ತೆಯನ್ನು ಮುಚ್ಚಿ ಈ ರಸ್ತೆಯಲ್ಲಿ ಬರುವ ವಾಹನಗಳು ಉಡುಪಿ ನಗರ ಪ್ರವೇಶಿಸಲು ಕಡಿಯಾಳಿ ಭಾಗದಲ್ಲಿ ಅವಕಾಶ ನೀಡಿರುವುದು ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ಇತರ ಎಲ್ಲಾ ಕಡೆಯಲ್ಲೂ ವಾಹನ ದಟ್ಟಣೆಯಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ತಕ್ಷಣದಲ್ಲಿ ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸಿ ಈ ಹಿಂದಿನಂತೆ ಸಂಚಾರ ವ್ಯವಸ್ಥೆಗೆ ಅವಕಾಶ ನೀಡುವಂತೆ ಮಾಜಿ ಶಾಸಕ ರಘುಪತಿ ಭಟ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ರಸ್ತೆಯನ್ನು ಮುಚ್ಚಿರುವುದರಿಂದ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಬರುವವರಿಗೆ, ಶಾಲಾ ಕಾಲೇಜುಗಳಿಗೆ ತೆರಳುವವರಿಗೆ ಹಾಗೂ ಪ್ರವಾಸಿಗರಿಗೆ ಸಮಸ್ಯೆಯಾಗುವ ಜೊತೆಯಲ್ಲಿ ಇತರ ಭಾಗಗಳಿಗೂ ವಾಹನ ದಟ್ಟಣೆ ಹರಡಿರುವುದನ್ನು ಗಮನಿಸಬೇಕಾಗಿದೆ.

ಉಡುಪಿ ನಗರ ಪ್ರವೇಶಿಸುವ ರಸ್ತೆಗಳ ವಾಹನ ದಟ್ಟಣೆಯನ್ನು ನಿಯಂತ್ರಿಸಲು ರಸ್ತೆಗಳನ್ನು ಮುಚ್ಚುವುದು ಪರಿಹಾರವಲ್ಲ. ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ಈಗಾಗಲೆ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ತಕ್ಷಣದಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿ. ರಸ್ತೆ ಮುಚ್ಚಿರುವ ಅವೈಜ್ಞಾನಿಕ ಕ್ರಮದಿಂದ ಪೊಲೀಸರಿಗೆ ಕೆಲಸ ಕಡಿಮೆಯಾಗಿದೆಯೆ ಹೊರತು ಸಾರ್ವಜನಿಕರಿಗೆ ಅನುಕೂಲವಾಗುವ ಬದಲು ಹೆಚ್ಚಿನ ತೊಂದರೆಯಾಗಿದೆ. ತಕ್ಷಣದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕಲ್ಸಂಕ ಜಂಕ್ಷನ್ ನಲ್ಲಿ ಮುಚ್ಚಿರುವ ಉಡುಪಿ ಪ್ರವೇಶಿಸುವ ಅಂಬಾಗಿಲು – ಗುಂಡಿಬೈಲು ರಸ್ತೆಯ ಬ್ಯಾರಿಕೇಡ್ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಈ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments