ಕಳಂಕ ಹೊತ್ತ ರಘುಪತಿ ಭಟ್ ಅವರ ಅಗತ್ಯತೆ ಕಾಂಗ್ರೆಸಿಗಿಲ್ಲ ; ಜನಾರ್ಧನ ತೋನ್ಸೆ
ಉಡುಪಿ: ಹಲವಾರು ಕಳಂಕಗಳನ್ನು ಹೊತ್ತಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಅಗತ್ಯತೆ ಎಂದಿಗೂ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ ಹೇಳಿದ್ದಾರೆ.
ಅವರು ಮಂಗಳವಾರ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿಯ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸುದ್ದಿಗಳು ಹಬ್ಬುತ್ತಿವೆ ಇವೆಲ್ಲಾ ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಮೊದಲಿನಿಂದಲ್ಲೂ ರಘುಪತಿ ಭಟ್ ನಡತೆಯನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿದ್ದು ಅವರ ಪದ್ಮಪ್ರಿಯ ನಿಗೂಡ ಸಾವು ಪ್ರಕರಣ, ರೇವ್ ಪಾರ್ಟಿ ಪ್ರಕರಣ, ಸೆಕ್ಸ್ ಸೀಡಿ ಪ್ರಕರಣ, ಭೂ ಅವ್ಯವಹಾರ, ಡಿನೋಟಿಫಿಕೇಶನ್ ಪ್ರಕರಣ ಇಂತಹ ಹತ್ತಾರು ಪ್ರಕರಣಗಳು ಜೀವಂತವಾಗಿದ್ದು, ಇಂತಹ ಕಳಂಕಿತ ವ್ಯಕ್ತಿಯನ್ನು ಕಾಂಗ್ರೆಸ್ ಎಂದು ಕೂಡ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅವರ ಕಾಂಗ್ರೆಸ್ ಪಕ್ಷ ಸೇರುವ ಸುದ್ದಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಅಲ್ಲದೆ ಇಂತಹ ವ್ಯಕ್ತಿಯಿಂದ ಉಡುಪಿಯ ಜನತೆ ಪಾಠ ಕಲಿಯುವ ಅಗತ್ಯವಿಲ್ಲ. ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಸುದ್ದಿಗೋಷ್ಠೀಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಅಮೀನ್, ನಿತ್ಯಾನಂದ ಶೆಟ್ಟಿ, ನಾಯಕರಾದ ಜನಾರ್ಧನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.