ಕವನ ಜೀವನಾನುಭವದ ಸಂಭ್ರಮವಾಗಲಿ: ಕಲ್ಕೂರ
ಮಂಗಳೂರು: ಯುವ ಕವಿ, ಸಾಹಿತಿಗಳು ಬಹುಸಂಸ್ಕೃತಿಯ ಸಂಭ್ರಮ, ಜೀವನಾಭುವವನ್ನು ಕಾವ್ಯದ ಮೂಲದ ಸಂಭ್ರಮಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಎಸ್.ಕಲ್ಕೂರ ಸಲಹೆ ಮಾಡಿದರು.
ನಗರದ ನಾಸಿಕ್ ಬಿ.ಎಚ್.ಬಂಗೇರ ಸಭಾಭವನದಲ್ಲಿ ಬುಧವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಕಾವ್ಯ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ರಾಜರ ಕಾಲದಿಂದಲೂ ಸರಕಾರವು ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಬ್ಯಾರಿ ಭಾಷೆ ಕೂಡಾ ತುಳುವಿನಷ್ಟೇ ಪುರಾತನ. ಸೀಮಿತ ಪ್ರದೇಶದಲ್ಲಿದ್ದರೂ ಭಾಷೆ, ಸಂಸ್ಕೃತಿ ಉಳಿಸಿಕೊಂಡು ಬಂದಿದೆ. ಯುವ ಮನಸ್ಸುಗಳು ಅಂತರ್‌ಜಾಲದ ವ್ಯಾಮೋಹಕ್ಕೆ ಬಲಿಯಾಗದೆ, ಪರಿಸರ, ಪ್ರವಾಸ ಕಥನಗಳ ಜೀವನ ಅನುಭವಗಳನ್ನು ಕಾವ್ಯದ ಮೂಲಕ ಜನಮನ ಗೆಲ್ಲಲಿ ಎಂದು ಕಲ್ಕೂರ ಹಾರೈಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್ ಅಧ್ಯಕ್ಷತೆ ವಹಿಸಿ, ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಜವಾಬ್ದಾರಿ ಅಕಾಡೆಮಿಯದ್ದು. ಅದಕ್ಕೆ ಪೂರಕವಾಗಿ ಕಮ್ಮಟ, ಗೋಷ್ಠಿ ಏರ್ಪಡಿಸಿ, ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ಆಸಕ್ತರು ಅಕಾಡೆಮಿಯನ್ನು ಸಂಪರ್ಕಿಸಿದರೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಣ ಮತ್ತು ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ಭಾಗವಹಿಸಿ, ಪ್ರತಿನಿಧಿಗಳ ಜತೆ ಸಂವಾದ ಮೂಲಕ ಕಾವ್ಯ ರಚನೆ ಬಗ್ಗೆ ಉಪನ್ಯಾಸ ನೀಡಿದರು.
೫೦ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರಿಗೆ ಕವನ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು. ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅಬುದಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು.
ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಮೇಲ್ತೆನೆ ಸಂಘಟನೆ ಗೌರವಾಧ್ಯಕ್ಷ ಆಲಿ ಕುಂಞಿ ಪಾರೆ, ಸಾಹಿತಿ ಯು.ಎ.ಕಾಸಿಂ ಉಳ್ಳಾಲ, ಶಂಸುದ್ದೀನ್ ಮಡಿಕೇರಿ, ಅಕಾಡೆಮಿ ಸದಸ್ಯರಾದ ಆಯಿಷಾ ಯು.ಕೆ., ಬಶೀರ್ ಬೈಕಂಪಾಡಿ, ಪಿ.ಎಂ.ಹಸನಬ್ಬ ಮೂಡುಬಿದಿರೆ, ಬಶೀರ್ ಅಹ್ಮದ್ ಕಿನ್ಯ, ಎಸ್.ಎಂ.ಶರೀಫ್ ಮಡಿಕೇರಿ, ತನ್ಸೀಫ್ ಬೆಳ್ತಂಗಡಿ, ಅನ್ಸಾರ್ ಬೆಳ್ಳಾರೆ, ಸಲೀಂ ಬರಿಮಾರು ಉಪಸ್ಥಿತರಿದ್ದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹುಸೇನ್ ಕಾಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮೊಹಮ್ಮದ್ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು.