ಕವಿಸಮಯ ಕವಿನಮನ: ಸತ್ಯಮಂಗಲ ಮಹಾದೇವ
ಮೂಡಬಿದ್ರೆ: ನಮ್ಮ ನಾಡಿನ ಪರಂಪರೆ ಮತ್ತು ಇತಿಹಾಸವು ಎಲ್ಲರ ಒಳಿತನ್ನು ಬಯಸುವ ಬಹುತ್ವದ ನೆಲೆಯಲ್ಲಿದ್ದು, ನಮ್ಮಲ್ಲಿರುವ ಸಣ್ಣತನಗಳನ್ನು ಮೀರಿ ಪ್ರತಿಯೊಬ್ಬರೂ ಬಹುತ್ವದ ನೆಲೆಗೆ ಏರುವ ಕನಸನ್ನು ಕಾಣಬೇಕು ಎಂದು ಪ್ರೊ. ಸತ್ಯಮಂಗಲ ಮಹಾದೇವ ಹೇಳಿದರು.
`ಆಳ್ವಾಸ್ ನುಡಿಸಿರಿ’ ರ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ `ಕವಿಸಮಯ-ಕವಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾಗತೀಕರಣದಿಂದಾಗಿ ಮನುಷ್ಯರನ್ನು ಯಂತ್ರಗಳಂತೆ, ಯಂತ್ರಗಳನ್ನು ಮನುಷ್ಯರಂತೆ ಕಾಣುವ ಪರಿಸ್ಥಿತಿ ಎದುರಾಗಿದ್ದು, ಜಾತಿ, ಮತ, ಧರ್ಮ, ಸಂಪ್ರದಾಯದೊಳಗೆ ರಾಜಕಾರಣ ತುಂಬಿಕೊಂಡು ಮನುಷ್ಯತ್ವ ಮರೆಯಾಗಿದೆ. ಸಮಾಜವನ್ನು ಪೂರ್ಣದೃಷ್ಠಿಯಿಂದ ನೋಡಿದಾಗ ಸಮಾಜವು ಆರೋಗ್ಯದಾಯಕವಾಗಿರುತ್ತದೆ ಆದರೆ ಇಂದಿನ ಅಕ್ಷರಸ್ಥ ಯುವಜನಾಂಗವು ಪೂರ್ಣ ದೃಷ್ಠಿ ಅಥವಾ ಪೂರ್ಣ ಯೋಗದ ಕಡೆಯಾಗಲೀ ನೋಡದೇ ಆತುರಾತುರವಾಗಿ ನೋಡುತ್ತಿದ್ದಾರೆ. ಇದರಿಂದ ಧರ್ಮ, ಜಾತಿ, ಸಂಪ್ರದಾಯಗಳಲ್ಲಿ ಶೋಷಣೆಗಳು ಕಾಲಕಾಲದಿಂದ ಹೆಚ್ಚಾಗಿ ನಡೆಯುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ಮನುಷ್ಯನು ಸ್ವಾರ್ಥ ಭಾವನೆಯಿಂದ ತನ್ನ ಬಗ್ಗೆ ಮಾತ್ರ ಚಿಂತಿಸುವನೇ ಹೊರತು ಯಾವುದೇ ಗಿಡ, ಮರ , ಪ್ರಾಣಿ ಪಕ್ಷಿಯಂತಹ ಜೀವಸಂಕುಲಗಳ ಕುರಿತು ಚಿಂತಿಸುವುದಿಲ್ಲ. ಭೂಮಿಯ ಮೇಲಿನ ಪ್ರತಿಯೊಂದಕ್ಕೂ ಜೀವವಿದೆ ಎಂಬುದನ್ನು ಅರ್ಥಮಾಡಿಕೊಂಡಾಗ ನಮ್ಮಲ್ಲಿ ಬೌದ್ಧಿಕ ಪ್ರಜ್ಞೆ ಹುಟ್ಟಿಕೊಳ್ಳುತ್ತದೆ. ವಿಜ್ಞಾನ ಯುಗದಲ್ಲಿರುವ ನಾವು ಯಾವುದೇ ಶ್ರಮವಿಲ್ಲದೇ ಸಂತೋಷವನ್ನು ಪಡೆಯುವಲ್ಲಿ ಸಫಲರಾಗಿದ್ದರೂ ಅನ್ನ ಕೊಡುವ ರೈತರ ವಿಚಾರದಲ್ಲಿ ವಿಫಲವಾಗಿದ್ದೇವೆ ಎಂದರು.
ಬದಲಾಗುತ್ತಿರುವ ಇಂದಿನ ಭಾಷಾ ಬಳಕೆಯ ಕುರಿತು ಮಾತನಾಡಿದ ಸತ್ಯಮಂಗಲ, ಇಂದು ರಾಜಕೀಯದಿಂದಾಗಿ ಕೆರಳುವ ಭಾಷೆ ಹೆಚ್ಚಾಗಿದ್ದು, ಅರಳುವ ಭಾಷೆ ಕಡಿಮೆಯಾಗುತ್ತಿದೆ ಪ್ರತಿಯೊಬ್ಬರನ್ನೂ ಕೆರಳಿಸುವ ರೀತಿಯಲ್ಲಿ ಮಾತುಗಳನ್ನು ಆಡುತ್ತಿದ್ದು ಗಾಂಧೀಜಿಯಂತಹ ಅರಳಿಸುವ ಭಾಷೆಯನ್ನಾಡುವವರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಂವಿಧಾನನ್ನು ಮೂರನೇ ಮಹಾಕಾವ್ಯ ಎಂದು ಭಾವಿಸಬೇಕಾಗಿದ್ದು, ಸಂವಿಧಾನವನ್ನು ಗೌರವಿಸಿದರ ಜೊತೆಗೆ ಯಾರನ್ನೂ ಕೀಳಾಗಿ ಕಾಣದೇ ಪರಸ್ಪರ ಆತ್ಮದ ಘನತೆಯಿಂದ ಎಲ್ಲರನ್ನೂ ಗೌರವಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ರಚಿಸಿರುವ `ಗಾಂಧೀಯ ನಗು ಮಾಸುವುದಿಲ್ಲ’ಎಂಬ ಕವನವನ್ನು ಪ್ರಸ್ತುತ ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ನುಡಿಸಿರಿಯ ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ.ಎಸ್ ಘಂಟಿ ಹಾಗೂ ನುಡಿಸಿರಿ ಸಮಿತಿಯ ಉಪಾಧ್ಯಕ್ಷ ಡಾ,ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಆಶಾ ನಿರೂಪಿಸಿದರು.
ಶ್ರೀರಕ್ಷಾ ರಾವ್