ಕಸದಿಂದ ರಸ: ಧರ್ಮಸ್ಥಳ ಗ್ರಾ.ಪಂ.ಗೆ ರೂ. 19260 ಆದಾಯ
ಮಂಗಳೂರು : ಕಸದಿಂದ ರಸ ಎಂದು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಇಲ್ಲೊಂದು ಗ್ರಾಮ ಪಂಚಾಯತ್ ನಿಜವಾಗಿಯೂ ಕಸದಿಂದ ಆದಾರ ಪಡೆಯುವ ಮೂಲಕ ರಸ ಪಡೆದಿದೆ.
ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯೆಂದು ಘೋಷಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನೈರ್ಮಲ್ಯತೆಯಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಜಿಲ್ಲೆಯ ಎಲ್ಲಾ 230 ಗ್ರಾಮ ಪಂಚಾಯತ್ಗಳಲ್ಲಿ ಏಕರೂಪದ ‘ಸ್ವಚ್ಛತಾ ನೀತಿ’ ಅನುಸರಿಸಲಾಗುತ್ತಿದೆ. ತ್ಯಾಜ್ಯ ವಸ್ತುಗಳ ವಿಲೇವಾರಿಗಾಗಿ ‘ನಮ್ಮ ತ್ಯಾಜ್ಯ-ನಮ್ಮ ಹೊಣೆ’ ಎಂಬ ಪರಿಕಲ್ಪನೆಯಡಿಯಲ್ಲಿ ಸಾರ್ವಜನಿಕರಲ್ಲಿ, ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಮಹಿಳೆಯರಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನು ಜಾಗೃತಗೊಳಿಸಲಾಗುತ್ತಿದೆ.
ಒಣ ತ್ಯಾಜ್ಯಗಳಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ನ್ನು ಸುಡದೇ, ಎಲ್ಲೆಂದರಲ್ಲಿ ಬಿಸಾಡದೆ ಜಿಲ್ಲಾ ಪಂಚಾಯತಿನ ಸೂಚನೆಯಂತೆ ಮನೆಗಳಲ್ಲಿ ಶುಚಿ ಮತ್ತು ಶುಷ್ಕವಾಗಿ ಶೇಖರಿಸಿಡುವ ಪದ್ಧತಿಯನ್ನು ಅಕ್ಟೋಬರ್ 2 ರಿಂದ ಜಾರಿ ಮಾಡಲಾಗಿದೆ. ಈ ರೀತಿ ಶೇಖರಿಸಲ್ಪಟ್ಟ ಶುಚಿ ಮತ್ತು ಶುಷ್ಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಜಿಲ್ಲೆಯ 1688 ಅಂಗನವಾಡಿ ಕೇಂದ್ರಗಳನ್ನು ‘ಸಂಗ್ರಹಣ ಕೇಂದ್ರಗಳನ್ನಾಗಿ’ ಗುರುತಿಸಿ ಪ್ರತೀ ತಿಂಗಳ ಮೂರನೇ ಶನಿವಾರದಂದು ಸಾರ್ವಜನಿಕರು ಸಮೀಪದ ಅಂಗನವಾಡಿ ಕೇಂದ್ರಕ್ಕೆ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ತಂದು ಕೊಡುತ್ತಿದ್ದಾರೆ.
ಈ ರೀತಿ ಸಂಗ್ರಹಿಸಲ್ಪಟ್ಟ ಪ್ಲಾಸ್ಟಿಕನ್ನು ಅದೇ ದಿನ ಸಂಜೆ ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳು ಸಂಗ್ರಹಿಸಿ ಪ್ಲಾಸ್ಟಿಕ್ ಕುಟೀರಗಳಲ್ಲಿ ಶೇಖರಿಸಿ ನಂತರ ಮೂರು ತಿಂಗಳಿಗೊಮ್ಮೆ ತ್ಯಾಜ್ಯವನ್ನು ಹರಾಜುಮಾಡಿ ಆದಾಯಗಳಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಡಿಸೆಂಬರ್ ತಿಂಗಳವರೆಗೆ ದ.ಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 2,190 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿರುತ್ತದೆ.
ಪ್ಲಾಸ್ಟಿಕ್ ತ್ಯಾಜ್ಯ ಮಾರಾಟದಿಂದ ಆದಾಯಗಳಿಸಿದ ಧರ್ಮಸ್ಥಳ ಗ್ರಾಮ ಪಂಚಾಯತ್: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮ ಪಂಚಾಯತಿನ ಘನ ತ್ಯಾಜ್ಯ ಘಟಕದಲ್ಲಿ ಸಂಗ್ರಹಿಸಲ್ಪಟ್ಟ 1 ಲೋಡ್ ಪ್ಲಾಸ್ಟಿಕ್ ತ್ಯಾಜ್ಯ ಮಾರಾಟದಿಂದ ರೂ. 19,260/-ಗಳನ್ನು ಗಳಿಸಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆದಾಯಗಳಿಸಿದೆ. ತನ್ಮೂಲಕ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಲಾಗಿದೆ.
ಇದೇ ರೀತಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.