ಕಸ್ಬಾ ಬೆಂಗ್ರೆ ಘಟನೆಗೆ ರಾಜಕೀಯ ಬಣ್ಣ ಬೇಡ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ; ಶಾಸಕ ಲೋಬೊ
ಮಂಗಳೂರು: ಕಸಬಾ ಬೆಂಗ್ರೆಯಲ್ಲಿ ಮಂಗಳವಾರ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ತರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮಂಗಳೂರು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳವಾರ ರಾತ್ರಿ ಉಡುಪಿಯಲ್ಲಿ ನಡೆದ ಮೀನುಗಾರರ ಸಮಾವೇಶ ಮುಗಿಸಿ ರಾತ್ರಿ ಬಸ್ಸುಗಳಲ್ಲಿ ವಾಪಾಸು ಬರುತ್ತಿದ್ದ ವೇಳೆ ಕಸ್ಬಾ ಬೆಂಗ್ರೆ ಬಳಿ ಅಹಿತಕರ ಘಟನೆ ನಡೆದಿದ್ದು, ನಾಲ್ಕು ಬಸ್ಸುಗಳು ಸುರಕ್ಷಿತವಾಗಿ ಹಾದು ಹೋಗಿದ್ದು, 5 ನೇ ಬಸ್ಸು ಹಾದು ಹೋಗುವ ವೇಳೆ ಕೆಲ ದುಷ್ಕರ್ಮಿಗಳು ಘೋಷಣೆಗಳನ್ನು ಕೂಗಿ ಕಲ್ಲು ತೂರಾಟ ನಡೆಸಿ, ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಜನರು ಜಮಾಯಿಸಿದ್ದು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ತೋಟ ಬೆಂಗ್ರೆ ಮತ್ತು ಕಸ್ಬಾ ಬೆಂಗ್ರೆಯ ಮುಖಂಡರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಆದರೆ ಈ ಘರ್ಷಣೆಗೆಯಾರೂ ಕಾರಣವೋ ಅವರ ಮೇಲೆ ಅಧಿಕಾರಿಗಳು ಯಾವುದೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಶಾಸಕರು ಹೇಳಿದರು.
ಪ್ರಸ್ತುತ ಸಮಸ್ಯೆ ಬಗೆಹರಿದಿದ್ದು, ತಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯ ಇಲ್ಲ. ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಕದಡುವ ಯತ್ನ ಬೇಡ, ರಕ್ತ ಸುರಿಸಿ ಚುನಾವಣೆ ಎದುರಿಸುವುದು ಬೇಡ ಎಂದರು.