ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಫರ್: ಕುಮಾರಸ್ವಾಮಿ ಗಂಭೀರ ಆರೋಪ

Spread the love

ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಫರ್: ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು (ಪ್ರಜಾವಾಣಿ ವಾರ್ತೆ) : ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲ ಶಾಸಕರಿಗೆ ಬಿಜೆಪಿ ರೂ.100 ಕೋಟಿ ಆಫರ್ ನೀಡಿದೆ. ಈ ಹಣ ಎಲ್ಲಿಂದ ನೀಡಲಾಗುತ್ತದೆ? ಇದು ಕಪ್ಪು ಹಣವೇ ಅಥವಾ ಬಿಳಿಹಣವೇ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಪ್ರಶ್ನಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.

ಕಪ್ಪುಹಣ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎನ್ನುವ ಪ್ರಧಾನಿ ಮೋದಿಯವರು ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಖರೀದಿಸಲು ಬಿಜೆಪಿ ಯಾವ ಹಣ ಬಳಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

‘ಮೋದಿಯಿಂದ ಅಧಿಕಾರ ದುರುಪಯೋಗ’: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಅಧಿಕಾರವನ್ನು ದುರುಪಯೋಗಪ ಮಾಡುತ್ತಿರುವುದನ್ನು ಅವರ ಹೇಳಿಕೆಯೇ ತೋರಿಸಿಕೊಟ್ಟಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಗೋವಾದಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ ಪಡೆದಿದ್ದರೂ ಬಿಜೆಪಿ ಮೈತ್ರಿ ಸರ್ಕಾರ ರಚಿಸಿತು. ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು ಮೋದಿ ಹೇಳುತ್ತಿದ್ದಾರೆ. ಇದು ಅಧಿಕಾರದ ದುರುಪಯೋಗವಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಅಭಿವೃದ್ಧಿಗಾಗಿ ನಿರ್ಧಾರ’: ಬಿಜೆಪಿಗೆ ದೊರೆತಿರುವ 104 ಸ್ಥಾನಗಳು ಕೆಲ ವರ್ಗದ ಜನರ ತಪ್ಪು ನಿರ್ಧಾರದಿಂದ ಬಂದಿರುವುದು ಎಂದೂ ಕುಮಾರಸ್ವಾಮಿ ಪ್ರತಿಪಾದಿಸಿದರು. ಅಲ್ಲದೆ, ಜೆಡಿಎಸ್‌ಗೆ ಧಕ್ಕೆ ಉಂಟುಮಾಡಲು ಹೋಗಿ ಬಿಜೆಪಿಗೇ ಧಕ್ಕೆಯಾಗಿದೆ ಎಂದರು.

‘ಸರ್ಕಾರಿ ಸಂಸ್ಥೆಗಳ ದುರುಪಯೋಗ’: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತಿತರ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಬಿಜೆಪಿಗೆ ಎಚ್ಚರಿಕೆ: ಆಪರೇಷನ್ ಕಮಲ ಮಾಡಲು ಮುಂದಾದರೆ ನಾವೂ ಬಿಜೆಪಿಯ ಶಾಸಕರನ್ನು ಸೆಳೆಯಲಿದ್ದೇವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.


Spread the love