ಕಾಂಗ್ರೆಸ್ ಆಡಳಿತದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ರಾಜ್ಯ ಗೃಹ ಸಚಿವರು ರಾಜೀನಾಮೆ ನೀಡಲಿ : ಕೆ.ಉದಯಕುಮಾರ್ ಶೆಟ್ಟಿ

Spread the love

ಕಾಂಗ್ರೆಸ್ ಆಡಳಿತದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ರಾಜ್ಯ ಗೃಹ ಸಚಿವರು ರಾಜೀನಾಮೆ ನೀಡಲಿ : ಕೆ.ಉದಯಕುಮಾರ್ ಶೆಟ್ಟಿ

ಉಡುಪಿ: ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಯ ನೆನಪು ಮಾಸುವ ಮುನ್ನ ಅದೇ ಮಾದರಿಯಲ್ಲಿ ಹುಬ್ಬಳ್ಳಿಯ ವೀರಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆಯಾಗಿದೆ. ಈ ಘಟನೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಹತ್ಯೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸದ ರಾಜ್ಯ ಗೃಹ ಸಚಿವರು ತಕ್ಷಣ ರಾಜಿನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದರು.  ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಭಿವೃದ್ಧಿಯನ್ನು ಮರೆತಿರುವ ಜೊತೆಗೆ ಕನಿಷ್ಠ ಪಕ್ಷ ರಾಜ್ಯದ ಜನತೆಯ ಪ್ರಾಣ ರಕ್ಷಣೆಗೂ ಬೆಲೆ ನೀಡುತ್ತಿಲ್ಲ ಎಂದು ಅವರು ತಿಳಿಸಿದರು.

ಹುಬ್ಬಳ್ಳಿಯ ವೀರಾಪುರದ 21 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಗಿರೀಶ್ ಅಲಿಯಾಸ್ ವಿಶ್ವ ಎಂ. ಸಾವಂತ್ ಎಂಬಾತ ಮೇ 15ರ ಮುಂಜಾನೆ ಆಕೆಯನ್ನು ಮನೆಯ ಹೊಸ್ತಿಲಲ್ಲೇ ಬರ್ಬರವಾಗಿ ಹತ್ಯೆಗೈದಿರುವುದು ನಾಗರಿಕ ಸಮಾಜವನ್ನು ಮತ್ತೊಮ್ಮೆ ಭಯಭೀತಿಯಲ್ಲಿ ನಲುಗುವಂತೆ ಮಾಡಿದೆ.

ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಾಮಾನ್ಯ ಘಟನೆ ಎಂದಿರುವ ಗೃಹ ಸಚಿವರು ಮತ್ತು ರಾಜ್ಯ ಸರಕಾರದ ಲಘು ಹೇಳಿಕೆಗಳು ಹಾಗೂ ಆರೋಪಿಯ ವಿರುದ್ಧ ಯಾವುದೇ ಕಠಿಣ ಕ್ರಮ ಜರಗಿಸದೇ ಇರುವುದು ಇಂತಹ ಹೇಯ ಕೃತ್ಯಗಳ ಪುನರಾವರ್ತನೆಗೆ ಮುಖ್ಯ ಕಾರಣವಾಗಿದೆ ಎಂದರು.

ಅಸಮರ್ಥ ಸರ್ಕಾರ, ಅಭಿವೃದ್ಧಿ ಶೂನ್ಯ ಸರ್ಕಾರ :

ಪ್ರಸಕ್ತ ರಾಜ್ಯದಲ್ಲಿರುವುದು ಅಸಮರ್ಥ ಮತ್ತು ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಕಳೆದ 11 ತಿಂಗಳಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುವುದು ಕಂಡುಬರುತ್ತಿದೆ. ರಾಜ್ಯ ಸರಕಾರವು ಜನರನ್ನು ಭಯದ ವಾತಾವರಣದಲ್ಲಿ ಬದುಕುವ ದಾರುಣ ಸ್ಥಿತಿಗೆ ತಲುಪಿಸಿದೆ.

ರಾಜ್ಯದಲ್ಲಿ ಪದೇ ಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಅಮಾನುಷ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಸರಕಾರದ ಅಸಮರ್ಥ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕೆಂಬ ಸಾಮರ್ಥ್ಯವೇ ಇಲ್ಲದ ಗೃಹ ಸಚಿವರು ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡಂತಿದೆ. ಪರಿಸ್ಥಿತಿಯ ಅವಲೋಕನ ಮಾಡಲೂ ಅಸಮರ್ಥವಾಗಿರುವ ರಾಜ್ಯ ಸರಕಾರದ ನಿಷ್ಕ್ರಿಯತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ತಿಳಿಸಿದರು.

ಒಂದು ಕಾಲದಲ್ಲಿ ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸ್ ಇಲಾಖೆ ದಕ್ಷತೆಯಲ್ಲಿ ಒಂದಕ್ಕೊಂದು ಪೈಪೋಟಿ ನೀಡುವಂತಿತ್ತು. ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಲಾಭದ ಹುನ್ನಾರ, ಓಟ್ ಬ್ಯಾಂಕ್ ಸಂರಕ್ಷಣೆಯ ಕಾರಣಕ್ಕೆ ಹಿಂದೆ ಕಾನೂನು ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ರಾಜ್ಯವು ಇವತ್ತು ಗೂಂಡಾರಾಜ್ಯವಾಗಿ ಮತ್ತು ಕೊಲೆಗಡುಕರ ರಾಜ್ಯವಾಗಿ ಪರಿವರ್ತನೆಗೊಂಡಿರುವುದು ವಿಷಾಧನೀಯ ಎಂದರು.

ಒಂದು ಅಂಕಿ ಅಂಶದ ಪ್ರಕಾರ, ಸಿಟಿ ಕ್ರೈಮ್ ಬ್ಯೂರೋ ಮತ್ತು ನ್ಯಾಷನಲ್ ಕ್ರೈಮ್ ಬ್ಯೂರೋ ಪ್ರಕಾರ ಕಳೆದ 11 ತಿಂಗಳಲ್ಲಿ ಶೇ.60ಕ್ಕಿಂತ ಹೆಚ್ಚು ಈ ರೀತಿಯ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಅಮಾನುಷ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿರುವುದು ಕಳವಳಕಾರಿ ಎನಿಸಿದೆ. ಇಂತಹ ಘಟನೆಗಳಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವೇ ಮುಖ್ಯ ಕಾರಣವಾಗಿದೆ. ರಾಜ್ಯ ಸರಕಾರ ಒಂದೇ ವರ್ಗದ ಅತಿಯಾದ ಓಲೈಕೆಯಿಂದ ದೃಢ ನಿರ್ಧಾರ ತೆಗೆದುಕೊಳ್ಳದ ಕಾರಣ ಪದೇ ಪದೇ ಸಮಾಜದಲ್ಲಿ ಇಂತಹ ದುರ್ಘಟನೆಗಳು ಹೆಚ್ಚುತ್ತಿವೆ ಎಂದರು.

ಹುಬ್ಬಳ್ಳಿಯ ಅಂಜಲಿಯ ಹತ್ಯೆ ಪ್ರಕರಣಕ್ಕೂ ಮೊದಲು ನೇಹಾ ಹತ್ಯೆ ಪ್ರಕರಣ, ಬೆಳಗಾವಿಯಲ್ಲಿ ನಡೆದ ದಲಿತ ಮಹಿಳೆಯ ವಿವಸ್ತ್ರಗೊಳಿಸಿದ ಅಮಾನವೀಯ ಘಟನೆ, ರೊಟ್ಟಿ ಕೇಳಿದ ದಲಿತ ಯುವಕನ ಹತ್ಯೆ ಮುಂತಾದ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿರುವುದನ್ನು ಸಾಬೀತುಪಡಿಸುತ್ತಿವೆ ಎಂದರು.

ರಾಜ್ಯದಲ್ಲಿ ಒಂದೆಡೆ ಮತಾಂಧ ಶಕ್ತಿಗಳು ಸ್ವಚ್ಛಂದವಾಗಿ ವಿಜೃಂಭಿಸುತ್ತಿದ್ದರೆ ಇನ್ನೊಂದೆಡೆ ಕೊಲೆಗಡುಕರು ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ಕರ್ನಾಟಕವು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾದ್ಯoತ ಹೋರಾಟ ನಡೆಸಲಿದೆ. ರಾಜ್ಯದ ಅಸಮರ್ಥ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸರಕಾರ ಈ ಎಲ್ಲ ಹತ್ಯೆಗಳ ಆರೋಪಿಗಳನ್ನು ಶೀಘ್ರ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೆ.ಉದಯ ಕುಮಾರ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ವಿಜಯಕುಮಾರ್ ಉದ್ಯಾವರ ಮತ್ತು ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love