ಕಾಂಗ್ರೆಸ್ ನಾಯಕರಿಗೆ ವಿಜಯಾ ಬ್ಯಾಂಕ್ ಬಗ್ಗೆ ಇರುವುದು ಕಪಟ ಪ್ರೀತಿ- ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ವಿಜಯ ಬ್ಯಾಂಕ್ ಕಟ್ಟಿ, ಬೆಳೆಸಿ, ತುಳುನಾಡಿನ ಅಸಂಖ್ಯಾತ ಜನರಿಗೆ ಉದ್ಯೋಗ ಕಲ್ಪಿಸಿ ಅವರ ಬದುಕಿನ ದಾರಿದೀಪವಾಗಿದ್ದ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡುವಾಗ ಅಡ್ಡಗಾಲು ಹಾಕಿದ ಕಾಂಗ್ರೆಸ್ಸಿಗರು ಅಂದು ಉಪವಾಸ ಸತ್ಯಾಗ್ರಹ ಮಾಡದೇ ಈಗ ಮೊಸಳೆ ಕಣ್ಣೀರು ಸುರಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ವಿಜಯ ಬ್ಯಾಂಕ್ ನ ಅಭಿವೃದ್ಧಿಯ ಹರಿಕಾರ ಮೂಲ್ಕಿ ಸುಂದರರಾಮ ಶೆಟ್ಟಿಯವರ ಬಗ್ಗೆ ಕರಾವಳಿಯ ಎಲ್ಲರಿಗೂ ಅಪಾರ ಗೌರವವಿದೆ. ಅವರ ಹೆಸರನ್ನು ರಸ್ತೆಗೆ ಇಡಲು ಪಾಲಿಕೆಯಲ್ಲಿ ಒಪ್ಪಿಗೆ ಸಿಕ್ಕಿದ್ದರೂ ಕೊನೆಯ ಕ್ಷಣದಲ್ಲಿ ಬೆಂಗಳೂರಿಗೆ ಹೋಗಿ ಅದಕ್ಕೆ ತಡೆಯಾಜ್ಞೆ ತಂದವರು ಯಾರು ಎನ್ನುವುದನ್ನು ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಶಾಸಕ ಕಾಮತ್ ಹೇಳಿದರು. ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಆ ರಸ್ತೆಗೆ ಇಟ್ಟಲ್ಲಿ ಕರಾವಳಿಯಲ್ಲಿ ಅಶಾಂತಿ ತಲೆದೋರಲಿದೆ ಎಂದು ರಾಜ್ಯ ಸರಕಾರದಿಂದ ತಡೆಯಾಜ್ಞೆ ತಂದವರು ಇಂದು ವಿಜಯ ಬ್ಯಾಂಕ್ ವಿಲೀನದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
ಮಂಗಳೂರಿನ ವಿಜಯ ಬ್ಯಾಂಕ್ ಬಗ್ಗೆ ನಮಗೆ ಅತೀವ ಗೌರವ ಮತ್ತು ಅಭಿಮಾನವಿದೆ. ಅಂದು ಬಹಳಷ್ಟು ಸೇವೆ ಸಲ್ಲಿಸುತ್ತಿದ್ದ ವಿಜಯ ಬ್ಯಾಂಕನ್ನು ಸಮುದಾಯದ ತೆಕ್ಕೆಯಿಂದ ಕಸಿದು ರಾಷ್ಟ್ರೀಕರಣಗೊಳಿಸಿದ್ದು ಯಾರು ಕಾಂಗ್ರೆಸ್ಸಿಗರಲ್ಲವೇ. ಅಂದು ದಿವ್ಯ ಮೌನ ತೋರಿಸಿದ್ದ ಕಾಂಗ್ರೆಸ್ಸಿಗರು ಇವತ್ತು ವಿಜಯ ಬ್ಯಾಂಕ್ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ದು:ಖಕರ. ಈ ವಿಲೀನ ಪ್ರಕ್ರಿಯೆ ಆರಂಭಿಸಿದ್ದು ಯುಪಿಎ ಸರಕಾರದಲ್ಲಿ ಚಿದಂಬರಂ ವಿತ್ತಸಚಿವರಾಗಿದ್ದಾಗ. ಅಂದಿನಿಂದ ಇಂದಿನವರೆಗೆ ಮಾತನಾಡದೆ ಕಾಂಗ್ರೆಸ್ ಮೌನವಾಗಿದ್ದು ಯಾಕೆ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ಸಿಗರು ಈಗ ಬೊಬ್ಬೆ ಹೊಡೆಯುತ್ತಿರುವುದು ಲೋಕಸಭಾ ಚುನಾವಣೆಯಲ್ಲಿ ಬೇರೆ ಯಾವುದೇ ವಿಷಯ ಇಲ್ಲದೆ ಇರುವುದಕ್ಕೆ ಎನ್ನುವುದು ಸ್ಪಷ್ಟವಾಗುತ್ತಿದೆ. ವಿಜಯ ಬ್ಯಾಂಕ್ ವಿಲೀನವಾಗಬಾರದು, ವಿಲೀನ ಆಗುವುದೇ ಆದರೆ ವಿಜಯ ಬ್ಯಾಂಕಿನ ಹೆಸರು ಮತ್ತು ಅಸ್ಮಿತೆ ಉಳಿಸಿಕೊಡಬೇಕು ಎಂದು ದಕ್ಷಿಣಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ವಿತ್ತಸಚಿವ ಅರುಣ್ ಜೇಟ್ಲಿಯವರಿಗೆ ಮನವಿ ಮಾಡಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಜನರಿಂದ ಎರಡು ಬಾರಿ ದಾಖಲೆಯ ಮತಗಳ ಅಂತರದಿಂದ ಗೆದ್ದಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಹಿಂಬಾಗಿಲಿನಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿರುವ ಐವನ್ ಡಿಸೋಜಾ ಅವರು ವೈಯಕ್ತಿಕವಾಗಿ ಟೀಕೆ ಮಾಡಿರುವುದು ಸರಿಯಲ್ಲ. ವಿಧಾನಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜಾ ಅವರು ಸಂಸದ ನಳಿನ್ ಕುಮಾರ್ ಕಟೀಲು ಅವರ ಬಟ್ಟೆ ಹರಿಯುತ್ತೇನೆ, ಅಂಗಿ ಬಿಚ್ಚುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಸಂಸ್ಕೃತಿಯನ್ನು ತೋರಿಸಿದ್ದಾರೆ. ಆಚಾರವಿಲ್ಲದ ನಾಲಿಗೆಯಿಂದ ಏನೇನೋ ಹೇಳಿದರೆ ಕರಾವಳಿಯ ಸಭ್ಯ ನಾಗರಿಕರಿಗೆ ಇವರ ರಾಜಕೀಯ ಗೊತ್ತಾಗುತ್ತದೆ. ಐವನ್ ಡಿಸೋಜಾ ಅವರ ಕೀಳುಮಟ್ಟದ ಹೇಳಿಕೆಯನ್ನು ಅವರ ಪಕ್ಷದವರೇ ಆಂತರಿಕವಾಗಿ ವಿರೋಧಿಸಿದ್ದಾರೆ ಎಂದು ಶಾಸಕ ಕಾಮತ್ ಹೇಳಿದರು. ಜನರಿಂದ ನೇರವಾಗಿ ಎರಡೆರಡು ಬಾರಿ ಆಯ್ಕೆಯಾದ ಸಂಸದರ ಬಗ್ಗೆ ಕೀಳುಮಟ್ಟದ ಹೇಳಿಕೆ ಕರಾವಳಿಯ ಜನರಿಗೆ ಆದ ಅವಮಾನ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಯಾವುದೇ ವ್ಯಕ್ತಿಗೂ ಅಗೌರವ ತೋರುವುದು, ಯಾವುದೇ ವ್ಯಕ್ತಿಗೆ ಹಗುರವಾಗಿ ಮಾತನಾಡುವುದು ಕರಾವಳಿಯ ಸಂಸ್ಕೃತಿಯಲ್ಲ ಮತ್ತು ಅದು ಶೋಭೆ ತರುವಂತದ್ದಲ್ಲ. ಐವನ್ ಡಿಸೋಜಾ ಒಬ್ಬರು ಜವಾಬ್ದಾರಿಯುತ ನಾಗರಿಕ ಮತ್ತು ಶಾಸಕ ಹೌದು ಎಂದಾದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಕ್ಷಮೆ ಕೋರಲಿ ಎಂದು ಶಾಸಕ ಕಾಮತ್ ಗುಡುಗಿದ್ದಾರೆ.