ಕಾಂಗ್ರೆಸ್ ನ ಗ್ಯಾರಂಟಿಯಲ್ಲಿ ಸಾಮಾಜಿಕ ನ್ಯಾಯವಿದೆ: ಜೆಪಿ ಹೆಗ್ಡೆ
ಚಿಕ್ಕಮಗಳೂರು: ನವಿಲು ಗರಿ ಮರಿ ಹಾಕುವುದಿಲ್ಲ, ಆದರೆ ನವಿಲು ಮರಿ ಹಾಕಿದೆ. ಅದು ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಮೂಲಕ. ಕೇಂದ್ರ ಸರಕಾರ ಬೃಹತ್ ಕಂಪೆನಿಗಳ 11 ಲಕ್ಷ ಕೋಟಿ ರೂ.ಗಳ ಸಾಲನವನ್ನು ಮನ್ನಾ ಮಾಡಿರುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಶ್ರೀಮಂತರ ಸಾಲ ಮನ್ನಾ ಮಾಡಿದವರಿಗೆ ಬಡವರ ಗ್ಯಾರೆಂಟಿಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಇದೆಂಥ ಸಾಮಾಜಿಕ ನ್ಯಾಯ? ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಡವರಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಆದವರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದೆ ಎಂದು ಮಾಜಿ ಸಚಿವ, ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಹೊಟ್ಟೆ ತುಂಬಿದವರಿಗೆ ನೆರವಾಗುವ ಕೇಂದ್ರ ಸರಕಾರದ ಈ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಈ ಬಗ್ಗೆ ಚರ್ಚೆ ಮಾಡದೆ ಬರೇ ನವಿಲು ಗರಿಯ ಕತೆ ಹೇಳಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಜನಪ್ರತಿನಿಧಿಗಳಿಂದ ಕ್ಷೇತ್ರದ ಕೆಲಸಗಳನ್ನು ಮಾಡಿಕೊಳ್ಳುವಷ್ಟು ಅರಿವು ನಮ್ಮಲ್ಲಿ ಮೂಡಬೇಕು. ಬರೇ ಆಶ್ವಾಸನೆಗಳಿಗೆ ಮರುಳಾಗಬಾರದು. 2014ರ ಚುನಾವಣೆ ವೇಳೆ ನೀಡಿದ ಎರಡು ಕೋಟಿ ಉದ್ಯೋಗ ಭರವಸೆಯಲ್ಲಿ ಯಾರಿಗೆ ಕೆಲಸ ಸಿಕ್ಕಿದೆ? ಇಲ್ಲಿಯ ಪ್ರವಾಸೋಸದ್ಯಮದ ಬಗ್ಗೆ ಹೆಚ್ಚಿನ ಕಾರ್ಯ ನಡೆಯಬೇಕಿದೆ. ಇದರಿಂದ ಉದ್ಯೋಗ ಅವಕಾಶಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೇಂದ್ರ ಸರಕಾರ ಮಾಡುತ್ತಿರುವ ಕೆಲಸ ಉದ್ದಿಮೆಗಳನ್ನು ಮಾರಾಟ ಮಾಡುವುದು. ಇದರಿಂದ ದೇಶದ ಯುವ ಜನತೆಗೆ ಕೆಲಸ ಸಿಗುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರದ ಪ್ರಕಾರ ದೊಡ್ಡ ಉದ್ದಿಮೆಯವರು ಮಾತ್ರ ಹಣವನ್ನು ಗಳಿಸಬೇಕು. ಚಿಕ್ಕ ಉದ್ದಿಮೆ ಮತ್ತು ಸರಕಾರಿ ಸ್ವಾಮ್ಯದ ಕಂಪೆನಿಗಳು ನಷ್ಟದಲ್ಲಿ ನಡೆದರೆ ಚಿಂತೆ ಇಲ್ಲ ಎನ್ನುವ ಕ್ರಮ ಸೂಕ್ತವಲ್ಲ. ನಾವು ನಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಮತ ಚಲಾಯಿಸಬೇಕು. ಜನರು ಕೂಡ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಮಾಡಿದ ಕೆಲಸವನ್ನು ಗಮನದಲ್ಲಿರಿಸಿಕೊಳ್ಳಬೇಕು. ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಬಿಜೆಪಿ ಸರಕಾರದ ನಿಲುವು ಈ ದೇಶದ ಭವಿಷ್ಯಕ್ಕೆ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಆದ್ದರಿಂದ ನಾಳೆಯ ಒಳ್ಳೆಯ ದಿನಗಳಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ದೇಶದ ಭವಿಷ್ಯಕ್ಕೆ ಕೈ ಜೋಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.