ಕಾಂಗ್ರೆಸ್ ಪಕ್ಷದ ಕೊರೋನಾ ವಾರಿಯರ್ಸ್ ಗಳಿಂದ ಮನೆ ಮನೆಗೆ ‘ಆರೋಗ್ಯ ಹಸ್ತ’
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಂಗಳೂರು ನಗರ ಬ್ಲಾಕ್ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪ್ರತೀ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಕೊರೋನಾ ವಾರಿಯರ್ಸ್ ಗಳಿಗೆ ತರಬೇತಿ ಕಾರ್ಯಗಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ರವರು, ಕೊರೋನಾ ವೈರಸ್ ದೇಶವ್ಯಾಪಿ ಹಬ್ಬಿದ್ದು, ಅದರ ವಿರುದ್ದ ಜನಜಾಗೃತಿ ಮಾಡುವುದು ಅನಿವಾರ್ಯವಾಗಿದೆ. ಈ ಕೊರೋನಾ ರೋಗವು 3ನೇ ಹಂತಕ್ಕೆ ತಲುಪುವ ಬಗ್ಗೆ ಸುದ್ದಿ ಹರಡುತ್ತಿದ್ದು, ಇದನ್ನು ಹತೋಟಿಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕೊರೋನಾ ಪ್ರಾರಂಭ ಹಂತದಿಂದಲೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಬಹಳಷ್ಟು ಶ್ರಮಿಸುತ್ತಾ ಬಂದಿದೆ. ಪಕ್ಷದ ಶಾಸಕರು, ಎಲ್ಲಾ ಮಾಜಿ ಶಾಸಕರು, ಜಿಲ್ಲಾ ನಾಯಕರು ಬಡ ಜನರಿಗೆ ಬೇಕಾಗುವಂತಹ ದಿನಸಿ ಕಿಟ್ ಮತ್ತು ಇತರ ಅಗತ್ಯದ ವಸ್ತುಗಳನ್ನು ಮನೆಮನೆಗೆ ಭೇಟಿ ನೀಡಿ ವಿತರಿಸಿದ್ದಾರೆ ಎಂದರು.
ಆರೋಗ್ಯ ಹಸ್ತ ಕಾರ್ಯಕ್ರಮವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದನ್ನು ಯಶಸ್ವಿಯಾಗಿ ನಡೆಸಲು ಪಕ್ಷದ ಎಲ್ಲಾ ಕೊರೋನಾ ವಾರಿಯರ್ಸ್ ಗಳು ಅನುವುಮಾಡಿಕೊಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹರೀಶ್ ಕುಮಾರ್ ರವರು ಕೊರೋನಾ ವಾರಿಯರ್ಸ್ ಗಳಿಗೆ ಆರೋಗ್ಯ ಸುರಕ್ಷಾ ಹಾಗೂ ಪರೀಕ್ಷಾ ಕಿಟ್ ಗಳನ್ನು ವಿತರಿಸಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಶಾಹುಲ್ ಹಮೀದ್ ರವರು ಕೊರೋನಾ ವಾರಿಯರ್ಸ್ ಗಳಿಗೆ ಮನಮುಟ್ಟುವ ರೀತಿಯಲ್ಲಿ ತರಬೇತಿ ಹಾಗೂ ಸಲಹೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ನಗರ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ರವರು ಮಾತನಾಡಿ, ಅತ್ಯಂತ ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ನೊಂದವರ ಜೊತೆಗೆ ನಿಂತಿದೆ. ಕೊರೋನಾ ಪೀಡಿತರಿಗೆ ಮಾಹಿತಿ, ಸಹಕಾರ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ತರಬೇಕೆಂದು ಕೊರೋನಾ ವಾರಿರ್ಯಸ್ ಗಳಿಗೆ ಕರೆಯಿತ್ತರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಸ್ತುವಾರಿ ಮುರಳಿ ಶೆಟ್ಟಿ ಇಂದ್ರಾಳಿ, ಪಕ್ಷದ ಪ್ರಮುಖರಾದ ಟಿ.ಕೆ.ಸುಧೀರ್, ಸುರೇಶ್ ಶೆಟ್ಟಿ, ಟಿ.ಹೊನ್ನಯ್ಯ, ಶಾಂತಲ ಗಟ್ಟಿ, ನವೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ ಸ್ವಾಗತಿಸಿದರು. ಸದಾಶಿವ್ ಅಮೀನ್ ಧನ್ಯವಾದಗೈದರು.