ಕಾಂಗ್ರೆಸ್ ಮತ ವಿಭಜನೆಗಾಗಿ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ಬೆಳೆಸಿದ್ದು ಬಿಜೆಪಿ ಪಕ್ಷ; ರಾಮಲಿಂಗಾ ರೆಡ್ಡಿ
ಉಡುಪಿ: ಕಾಂಗ್ರೆಸ್ ಮತ ವಿಭಜನೆಗಾಗಿ ತಮ್ಮ ಅಧಿಕಾರಾವಧಿಯಲ್ಲಿ ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸದೆ ಆ ಸಂಘಟನೆಗಳನ್ನು ಬೆಳೆಯಲು ಬಿಟ್ಟವರೇ ಬಿಜೆಪಿ ಪಕ್ಷದವರು ಎಂದು ರಾಜ್ಯದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರಾವಳಿಯಲ್ಲಿ ಎರಡು ಭಯೋತ್ಪಾದಕರ ಫ್ಯಾಕ್ಟರಿಗಳಿದ್ದು ಮುಚ್ಚುವ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ದೇವೆ. ಬಿಜೆಪಿಯವರಿಂದ ಜನ ರಕ್ಷಿಸೋ ಕೆಲಸ ಮೊದಲು ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಆಡಳಿತದಲ್ಲಿ ಮುಂದುವರಿಯುತ್ತದೆ ಎಂದು ರೆಡ್ಡಿ ತಿಳಿಸಿದರು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಬಹಳ ಕಡಿಮೆಯಾಗಿದ್ದು ನೂತನ ನೀತಿಯಂತೆ 10 ಮಂದಿ ಶರಣಾಗಿದ್ದಾರೆ. ಇನ್ನೂ 8ರಿಂದ 10 ಮಂದಿ ಇದ್ದು ಶೋಧ ಮುಂದುವರಿದಿದೆ. 300 ಕಿ. ಮೀ. ವಿಸ್ತೀರ್ಣದ ಕರಾವಳಿ ಭದ್ರತಾ ಪಡೆಗೆ ಸಿಬ್ಬಂದಿ ಕೊರತೆಯಿದ್ದರೂ ಉಳಿದ ನೆರವನ್ನು ಕೇಂದ್ರ ಕೊಡಬೇಕು ಎಂದರು.
ಗೌರಿ ಹಂತಕರನ್ನು ಶೀಘ್ರ ಬಂಧಿಸುತ್ತೇವೆ ಎಂದು ಅಸೆಂಬ್ಲಿಯಲ್ಲಿ ಹೇಳಿದ್ದು ಅದಕ್ಕಿಂತ ಹೆಚ್ಚೇನೂ ಹೇಳೋದಿಲ್ಲ. ವಿಧಾನಪರಿಷತ್ ಸದಸ್ಯ ಕೆ. ಎಸ್. ಈಶ್ವರಪ್ಪ ಹೇಳಿಕೆಗಳನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಬೇರೆ ರಾಜ್ಯದ, ಎನ್‍ಸಿಆರ್ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದು ವಿವರಿಸಿದರು.
ಈಶ್ವರಪ್ಪ ಅವರಿಗೆ ಈ ಅಂಕಿ ಅಂಶಗಳೆಲ್ಲಾ ಗೊತ್ತಾಗೋದಿಲ್ಲ. ಪ್ರತಿಪಕ್ಷದಲ್ಲಿದ್ದೇನೆಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಗೋವುಗಳ ಬಗ್ಗೆ ಬಿಜೆಪಿಗೆ ನಿಜವಾದ ಪ್ರೀತಿ ಇದ್ದರೆ ಕೇಂದ್ರದಲ್ಲಿ ಇರೋ ಬಿಜೆಪಿ ಸರಕಾರ ಗೋ ಮಾಂಸ ರಫ್ತು ನಿಷೇಧಿಸಲಿ . ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋ ಹತ್ಯೆ, ಗೋ ಮಾಂಸ ರಫ್ತಾಗುತ್ತಿದ್ದರೂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಮನೇಕಾ ಗಾಂಧಿ ಚಕಾರ ಎತ್ತೋದಿಲ್ಲ ಎಂದರು.
ಗೋ ಹತ್ಯೆ ಮಾತ್ರವಲ್ಲ ಯಾವ ಪ್ರಾಣಿಯ ಹತ್ಯೆಯೂ ಸಲ್ಲದು. ಗೋ ಮಾಂಸ ರಫ್ತು ನಿಷೇಧಿಸಿದರೆ ಎಷ್ಟೊಂದು ಹಸುಗಳು ಉಳಿಯುತ್ತವೆ. ಕೇಂದ್ರ ಗೋ ಮಾಂಸ ರಫ್ತು ನಿಲ್ಲಿಸೋದಾದರೆ ನನ್ನ ಬೆಂಬಲವಿದೆ. ಸುಪಾರಿ ಹಂತಕರಿಗೆ ಪೂರಕವಾದ ಅಕ್ರಮ ಶಸ್ತ್ರಾಸ್ತ್ರ ಉತ್ಪಾದನೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಾಗುತ್ತಿದೆ ಎಂದು ಸಚಿವರು ಹೇಳಿದರು.