Home Mangalorean News Kannada News ಕಾಂಗ್ರೆಸ್ ಮುಖಂಡರಿಗೆ ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಇದೆ; ಶೋಭಾ ಕರಂದ್ಲಾಜೆ ಆರೋಪ

ಕಾಂಗ್ರೆಸ್ ಮುಖಂಡರಿಗೆ ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಇದೆ; ಶೋಭಾ ಕರಂದ್ಲಾಜೆ ಆರೋಪ

Spread the love

ಕಾಂಗ್ರೆಸ್ ಮುಖಂಡರಿಗೆ ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಇದೆ; ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಹೊಂದಿರುವುದು ಇದ್ದರೆ ಅದು ಕೇವಲ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಅವರು ಗುರುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯದಲ್ಲಿ ಬಿಜೆಪಿಯ ಹೋರಾಟವನ್ನು ದಾರಿ ತಪ್ಪಿಸುವ ಕೆಲಸವನ್ನು ಸಚಿವ ಖಾದರ್ ಅವರು ಮಾಡುತ್ತಿದ್ದು, ಕೆಎಫ್ ಡಿ ಮತ್ತು ಪಿಎಫ್ ಐ ನಿಷೇಧ ಮಾಡಿ ಎಂದು ಹೇಳಿದ ಕೂಡಲೇ ಬಿಜೆಪಿ ನಾಯಕರಿಗೆ ಅವರೊಂದಿಗೆ ಸಂಪರ್ಕ ಇದೆ ತಪ್ಪು ಹಾಗೂ ಸುಳ್ಳು ಮಾಹಿತಿಯನ್ನು ಸಚಿವ ಖಾದರ್ ಅವರು ನೀಡುತ್ತಾರೆ. ಇಂದು ಕೆಎಫ್ ಡಿ ಮತ್ತು ಪಿಎಫ್ ಐ ಜೊತೆ ನಿಕಟ ಸಂಪರ್ಕ ಹೊಂದಿರುವುದು ಇದ್ದರೆ ಅದು ಕೇವಲ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಎಂದ ಕರಂದ್ಲಾಜೆ ಕಾಂಗ್ರೆಸ್ ಮುಖಂಡರು ಕೆಎಫ್ ಡಿ ಮತ್ತು ಪಿಎಫ್ ಐ ಕಾರ್ಯಕರ್ತರ ಕೇಸುಗಳನ್ನು ಕ್ಯಾಬಿನೆಟಿಗೆ ತಂದು ಅವರುಗಳನ್ನು ಬಿಡುಗಡೆಗೊಳಿಸಿದ ಪರಿಣಾಮ ಇಂದು ನಾವು ಹಲವಾರು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಎಲ್ಲಾ ಕೃತ್ಯಗಳಲ್ಲಿ ಪಿಎಫ್ ಐ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಗಳಿಂದ ಬಯಲಾಗಿದೆ. ವ್ಯವಸ್ಥೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಖಾದರ್ ಮಾಡುತ್ತಿದ್ದು, ಬಿಜೆಪಿಗೆ ಕೆಎಫ್ ಡಿ, ಪಿಎಫ್ ಐ ಸಹಕಾರ ಬೇಕಿಲ್ಲ  ಇಂತಹ ಸುಳ್ಳು ಹೇಳಿಕೆ ನೀಡುವ ಖಾದರ್ ಅವರು ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿಯ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ವಿವಿಧ ರಾಜಕಾರಣಿಗಳ ಮೇಲೆ ಉದ್ಯಮಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಿತು ಯಾರು ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಂಡಿಲ್ಲ ಅಂತಹ ವ್ಯಕ್ತಿಗಳ ಮೇಲಿನ ಧಾಳಿ ಹೊಸತೇನಲ್ಲ ಕಳೆದ 70 ವರ್ಷಗಳಿಂದ ಇಂತಹ ಧಾಳಿ ನಡೆದಿದೆ. ಕರ್ನಾಟಕದಲ್ಲೂ ಕೂಡ ಸಹಜ ಸ್ಥಿತಯಲ್ಲಿ ನಡೆದಿದೆ. ಆದರೆ ಕರ್ನಾಟಕದ ಸರಕಾರ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿನ ಐಟಿ ಅಧಿಕಾರಿಗಳ ಮೇಲೆ ಎಸಿಬಿ ಯ ಮೂಲಕ ಧಾಳಿ  ನಡೆಸುವ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯಕ್ಕೆ ಇದೊಂದು ಅವಮಾನವಾಗಿ, ರಾಜ್ಯ ಸಂಪೂರ್ಣ ಭೃಷ್ಟಾಚಾರದೊಂದಿಗೆ ಕೈಜೋಡಿಸಿದ್ದು, ಭ್ರಷ್ಟರ ರಕ್ಷಣೆ ಮಾಡಲು ಹೊರಟಿದೆ. ಐಟಿ ಅಧಿಕಾರಿಗಳು ಇಂತಹ ಬೆದರಿಕೆಗಳಿಗೆ ಹೆದರುವವರಲ್ಲ. ಒಂದು ವೇಳೆ ಐಟಿ ಅಧಿಕಾರಿಗಳ ಮೇಲೆ ರಾಜ್ಯ ಸರಕಾಕ್ಕೆ ದೂರುಗಳಿದ್ದಲ್ಲಿ ಅದನ್ನು ಕೇಂದ್ರ ಸರಕಾರ ಅಥವ ಸಿಬಿಐ ಗೆ ತಿಳಿಸಬೇಕಿತ್ತು. ಅದರ ಬದಲು ಕರ್ನಾಟಕ ರಾಜ್ಯದ ಅಧಿಕಾರಿಗಳಿಗೆ ಐಟಿ ಅಧಿಕಾರಿಗಳನ್ನು ಪ್ರಶ್ನಿಸಲು ಅಧಿಕಾರವೇ ಇಲ್ಲ. ಐಟಿ ಅಧಿಕಾರಿಗಳು ಬೇರೆ ರಾಜ್ಯದಿಂದ ಇಲ್ಲಿಗೆ ವರ್ಗಾವಣೆಗೊಂಡು ಬಂದಿರುತ್ತಾರೆ ತನ್ನ ಪರಿಮಿತಿಯಲ್ಲಿ ಇಲ್ಲದ ಕೆಲಸಕ್ಕೆ ಸಿದ್ದರಾಮಯ್ಯ ಸರಕಾರ ಕೈ ಹಾಕಿದೆ ಎಂದರು.ಕೇಂದ್ರ ಸರಕಾರ ಇನ್ನೂ ಹೆಚ್ಚು ಪ್ರಾಮಾಣಿಕ ಅಧಿಕಾರಿಗಳನ್ನು ಕರ್ನಾಟಕ್ಕೆ ಹಾಕುವುದರ ಮೂಲಕ ಕರ್ನಾಟಕಲ್ಲಿನ ಭೃಷ್ಟಾಚಾರವನ್ನು ಬಯಲಿಗೆಳೆಯಬೇಕು ಎಂದರು.

ಮಂಗಳೂರಿನಲ್ಲಿ ಐಸಿಸ್ ಚಟುವಟಿಕೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಶೋಭಾ ಅವರು ಕರಾವಳಿಯಲ್ಲಿ ಭಯೊತ್ಪಾದನಾ ಚಟುವಟಿಕೆ ವೇಗವಾಗಿ ಬೆಳೆಯುತ್ತಿದ್ದು, ಸಿಮಿ ಸಂಘಟನೆಯ ಇನ್ನೊಂದು ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಕೆಎಫ್ ಡಿ ಸಂಘಟನೆಗಳು ಕಾರ್ಯಚರಿಸುತ್ತಿದೆ ಎಂದು ಹಲವಾರು ಬಾರಿ ನಾವು ಹೇಳಿಕೊಂಡು ಬಂದಿರುತ್ತೇವೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಐಸಿಸ್ ಕೂಡ ಸೇರಿಕೊಂಡಿದೆ ಎಂಬ ಮಾಹಿತಿಗಳು ಬರುತ್ತಿದೆ ನಾನು ಎರಡು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದು ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಒಂದು ಕಚೇರಿ ತೆರೆದು ಕರಾವಳಿ ಭಾಗದಲ್ಲಿನ ಭಯೊತ್ಪಾದನಾ ಚಟುವಟಿಕೆಮ ಲವ್ ಜಿಹಾದ್ ಹಾಗೂ ಇತರ ಸಮಾಜ ದ್ರೋಹಿ ಚಟುವಟಿಕೆಗಳನ್ನು ಮಟ್ಟಹಾಕಬೇಕು ಎಂದು ಆಗ್ರುಹಿಸಲಾಗಿದೆ. ಕರಾವಳಿಯಲ್ಲಿ ಐಸಿಸ್ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವರೊಂದಿಗೆ ಮಾತನಾಡಿದ್ದು ಇದರ ಕುರಿತು ವಿಸ್ತ್ರತ ತನಿಖೆ ನಡೆಸುವಂತೆ ಕೂಡ ಆಗ್ರಹಿಸಲಾಗಿದೆ ಎಂದರು.

ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169-ಎ (ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ)ಯ ಅಗಲೀಕರಣದ ನಿಮಿತ್ತವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದ್ದು,  ಪ್ರಸ್ತುತ ಕೆಟ್ಟು ಹೋಗಿರುವ ಸದರಿ ರಾಷ್ಟ್ರೀಯ ಹೆದ್ದಾರಿಯ ಮಣಿಪಾಲದ ಸಿಂಡಿಕೇಟ್ ಸರ್ಕಲ್‍ನಿಂದ ಪರ್ಕಳ ಬಿ.ಇ.ಎಂ. ಶಾಲೆಯವರೆಗಿನ ಭಾಗದ ತುರ್ತು ದುರಸ್ತಿ ಕಾರ್ಯವನ್ನು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಂತಹ ಅನುದಾನವನ್ನು ಹೊಂದಿಸಿಕೊಂಡು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಈ ಬಗ್ಗೆ ತಾನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿ 169-ಎ ಯ ಕೆಟ್ಟು ಹೋಗಿರುವ ವಿವಿಧ ಭಾಗಗಳ ಸಮಗ್ರ ದುರಸ್ಥಿಗಾಗಿ ರೂಪಾಯಿ 100 ಕೋಟಿಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದು ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪರ್ಕಳ – ಮಣಿಪಾಲ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿನ ದುರಸ್ತಿ ಕಾರ್ಯ ವಿಳಂಬವಾಗಿದೆ. ಆದರೆ ಇಂದಿನಿಂದ ಪರ್ಕಳ ಭಾಗದಲ್ಲಿ ಕೆಲಸ ಆರಂಭಗೊಂಡಿದೆ ಎಂದರು.


Spread the love

Exit mobile version