ಕಾಂಗ್ರೆಸ್ ಸರಕಾರದಿಂದ ಮಹಿಳೆಯರಿಗೆ ಸ್ವಾಭಿಮಾನದ ಬದುಕು: ಸೌಮ್ಯ ರೆಡ್ಡಿ
ಉಡುಪಿ: ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಮಹಿಳೆಯರು ಸ್ವಾಭಿಮಾನದ ಬದುಕಿಗೆ ಬೇಕಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಆದರೆ ಕೇಂದ್ರ ಸರಕಾರ ಕಳೆದ 10 ವರ್ಷಗಳಿಂದ ಅಚ್ಚೆದಿನ್ ಎನ್ನುತ್ತಲೇ ಇದ್ದು, ಅದೆಲ್ಲೂ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ ‘ಗಾಂಧಿ ಭಾರತ ಮಹಿಳಾ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯ ಕಾಂಗ್ರೆಸ್ ಸರಕಾರ ಮಹಿಳೆಯರ ಸಾಮಾಜಿಕ, ಆರ್ಥಿಕ ಸ್ವಾವಲಂಬನೆಯ ಬದುಕಿಗಾಗಿ ಗ್ಯಾರಂಟಿ ನೀಡಿದೆ. ಕೇಂದ್ರ ಸರಕಾರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗ ಹಾಗೂ ಮಹಿಳೆಯರ ಬದುಕು ದುಸ್ತರಗೊಳಿಸಿದೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.
ಹಿಂದೆ ಬ್ರಿಟಿಷರು ದೇಶದಲ್ಲಿ ಯಾವ ರೀತಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರೋ ಅದೇ ಮಾದರಿಯ ಆಡಳಿತವನ್ನು ಬಿಜೆಪಿ ಇಂದು ಅನುಸರಿಸುತ್ತಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜ ವನ್ನು ಒಡೆದು ಆಳುವ ನೀತಿ ಅನುಸರಿಸುವ ಜತೆಗೆ ಜಾತಿ, ಧರ್ಮದ ವಿಷಬೀಜ ಬಿತ್ತಿ ದೇಶವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಎಲ್ಲರಿಗೂ ತಲುಪಿಸುವ ಜತೆಗೆ ಗ್ರಾಮ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚೆಚ್ಚು ಮಹಿಳೆಯರನ್ನು ನೋಂದಾಯಿಸುವ ಕಾರ್ಯ ಆಗಬೇಕು. ಶೀಘ್ರವೇ ಜಿಪಂ, ತಾಪಂ ಚುನಾವಣೆಗಳು ಬರಲಿರುವುದರಿಂದ ಪಕ್ಷವನ್ನು ಈಗಿ ನಿಂದಲೇ ಸಜ್ಜುಗೊಳಿಸಬೇಕು ಎಂದು ಮಹಿಳಾ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಸಮರ್ಪಣೆ, ಸಂಕಲ್ಪ ಹಾಗೂ ಸಂಘರ್ಷದ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಜಾತ್ಯಾತೀತೆಯನ್ನು ಕಾಪಾಡಲು ಸಂಘರ್ಷ ಮಾಡಬೇಕಾಗಿದೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಪ್ರತಿ ಗ್ರಾಮದಲ್ಲೂ ಮಹಿಳಾ ಸಮಾವೇಶ ನಡೆಸಲು ಯೋಚನೆ ರೂಪಿಸುತಿದ್ದೇವೆ. ಮಹಿಳೆಯರು ಛಲತೊಟ್ಟರೆ ಪಕ್ಷ ಜಿಲ್ಲೆಯಲ್ಲಿ ಮತ್ತೆ ಮುಂಚೂಣಿಗೆ ಬರಲು ಸಾಧ್ಯವಿದೆ ಎಂದರು.
ಗ್ಯಾರಂಟಿ ಸಮಿತಿ ಸೇರಿದಂತೆ ವಿವಿಧ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಗೆ ಆಯ್ಕೆಯಾದ ಮಹಿಳೆ ಯರನ್ನು ಗೌರವಿಸಲಾಯಿತು. ಸಾಧಕರಿಗೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವರಂಗದ ಎಂ.ಡಿ. ಅಧಿಕಾರಿ ಮತ್ತು ಕಮಲಾ ಅಧಿಕಾರಿ ಹಾಗೂ ಉಮಾಬಾ ಕುಂದಾಪುರ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ಎಂ.ಎ.ಗಫೂರ್, ಮುನಿಯಾಲು ಉದಯಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ನೀರೆ ಕೃಷ್ಣ ಶೆಟ್ಟಿ, ವೆರೊನಿಕಾ ಕರ್ನೆಲಿಯೋ, ಜ್ಯೋತಿ ಹೆಬ್ಬಾರ್, ವಿಲಿಯಂ ಮಾರ್ಟಿಸ್, ರಾಘವೇಂದ್ರ ಶೆಟ್ಟಿ, ಗೋಪೀನಾಥ ಭಟ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಚಂದ್ರಕಲಾ, ಕುಶಾಲ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ಹರೀಶ್ ಕಿಣಿ, ಮೀನಾಕ್ಷಿ ಮಾಧವ ಬನ್ನಂಜೆ, ಮಮತಾ ಶೆಟ್ಟಿ, ರೇಖಾ, ಶಾಂತಲತಾ ಶೆಟ್ಟಿ ಮೊದಲಾದವರು ಉಪಸ್ಥಿರಿದ್ದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ. ಸುನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.