ಕಾಂತಾರಾ ಸ್ಟೈಲ್ನಲ್ಲಿ ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಹೊರಟ್ರಾ ಅಧಿಕಾರಿಗಳು?: ವಿವಾದ ಸೃಷ್ಟಿಸಿದ ಎಂಎಸ್ಇಝಡ್ ನಡೆ!

Spread the love

ಕಾಂತಾರಾ ಸ್ಟೈಲ್ನಲ್ಲಿ ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಹೊರಟ್ರಾ ಅಧಿಕಾರಿಗಳು?: ವಿವಾದ ಸೃಷ್ಟಿಸಿದ ಎಂಎಸ್ಇಝಡ್ ನಡೆ!

ಮಂಗಳೂರು: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ತುಳುನಾಡಿನ ದೈವಗಳ ಕುರಿತಾದ ಕಾಂತಾರ ಚಿತ್ರದಲ್ಲಿ ಒಂದು ಸನ್ನಿವೇಶವಿದೆ. ದೈವಗಳ ಕೋಲದ ಹೊತ್ತಲ್ಲಿ ಅರಣ್ಯಾಧಿಕಾರಿಯೊಬ್ಬ ‘ನಿಮ್ಮ ಆಚರಣೆ ಆಡಂಬರಗಳನ್ನೆಲ್ಲಾ ಬಂದ್ ಮಾಡ್ತೀನಿ’ ಎಂದು ಹೇಳುವ ದೃಶ್ಯವಿದು. ಇದೀಗ ಅದೇ ಮಾದರಿಯಲ್ಲಿ ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ ಭಾರೀ ವಿವಾದ ಸೃಷ್ಟಿಸಿದೆ. ಮಂಗಳೂರಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯದ(ಎಸ್ಇಝಡ್) ನಡೆ ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಎಂಎಸ್ಇಝಡ್ ವ್ಯಾಪ್ತಿಯಲ್ಲಿರೋ ಕಾಂತೇರಿ ಜುಮಾದಿ ದೇವಸ್ಥಾನದ ಆಚರಣೆಗೆ ಎಂಎಸ್ಇಝಡ್ ಅಧಿಕಾರಿಗಳು ತಡೆ ಒಡ್ಡಿದ ಆರೋಪ ಕೇಳಿ ಬಂದಿದೆ. ಮಂಗಳೂರು ಹೊರವಲಯದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ.

ಆದರೆ ಇದೀಗ ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು, ನೀರು ಇಡಲು ಬಿಡುವುದಿಲ್ಲವೆನ್ನುವ ಮೂಲಕ ಎಸ್ಇಝೆಡ್ ಅಧಿಕಾರಿಗಳು ವಿವಾದ ಸೃಷ್ಟಿಸಿದ್ದಾರೆ. ತಿಂಗಳ ಸಂಕ್ರಮಣ ಪೂಜೆ ಸಲ್ಲಿಸಲು ಎಸ್ಇಝಡ್ ಅಧಿಕಾರಿಗಳಿಂದ ತಡೆ ಒಡ್ಡಲಾಗಿದ್ದು, ಎಸ್ಇಝಡ್ ಆವರಣದ ಒಳಗಡೆ ಇರೋ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೇವಸ್ಥಾನದಲ್ಲಿ ಸದ್ಯ ದೈವಾರಾಧನೆ ಸ್ಥಗಿತವಾಗಿದೆ. 2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು. ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿತ್ತು.

ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ದೇವಸ್ಥಾನ ಮುಟ್ಟಲಾಗಲಿಲ್ಲ. ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡರೂ ದೈವಸ್ಥಾನ ಮಟ್ಟಲಾಗಲಿಲ್ಲ. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ ಎಂದು ದೈವ ನುಡಿದ ಕಾರಣ ಸಾವಿರಾರು ಎಕರೆ ಕೈಗಾರಿಕಾ ಪ್ರದೇಶದಲ್ಲಿ ಏಕಾಂಗಿಯಾಗಿ ಕಾಂತೇರಿ ಜುಮಾದಿ ದೈವದ ದೈವಸ್ಥಾನ ಈಗಲೂ ಇದೆ. 2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ದೈವಸ್ಥಾನವನ್ನು ಒಂದು ಸ್ಮಾರಕದ ಹಾಗೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು.

ದೈವದ ನಿತ್ಯ ಪೂಜೆಗೆ ಒಂದಿಬ್ಬರಿಗೆ ಹೋಗಿ ಬರಲು ಅವಕಾಶ ನೀಡಿದ್ದರು. ಸಾವಿರಾರು ಎಕರೆ ಕಂಪನಿಯ ಮಧ್ಯದಲ್ಲಿ ಇಂದಿಗೂ ದೈವ ಜುಮಾದಿಗೆ ನಿತ್ಯ ನಂದಾದೀಪ ಉರಿಯುತ್ತಿದೆ. ವರ್ಷಕ್ಕೊಮ್ಮೆ ದೈವದ ಕೋಲ-ನೇಮಗಳು ನಡೆಯುತ್ತಿವೆ. ಆದರೆ ಇದೀಗ ಮತ್ತೆ ತಗಾದೆ ತೆಗೆದ ಅಧಿಕಾರಿಗಳಿಂದ ದೈವಾರಾಧನೆಗೆ ತಡೆ ಒಡ್ಡಲಾಗಿದ್ದು, ಎಸ್ಇಝಡ್ ಗೇಟ್ ನಲ್ಲೇ ದೈವಾರಾಧಕರಿಗೆ ದೈವಾರಾಧನೆಗೆ ತಡೆ ಒಡ್ಡಲಾಗಿದೆ. ಕಳೆದ ಸಂಕ್ರಾಂತಿ ಆಚರಣೆಯ ವೇಳೆ ದೈವದ ಸೇವೆ ನಡೆಸಲು ಒಳ ಹೋಗದಂತೆ ನಿರ್ಬಂಧ ವಿಧಿಸಲಾಗಿದ್ದು, ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನದಲ್ಲಿ ದೈವಕ್ಕೆ ಹೂವು ನೀರು ಇಡಲು ನಿರ್ಬಂಧ ಹೇರಲಾಗಿದೆ. ಸದ್ಯ ಕಂಪೆನಿ ಅಧಿಕಾರಿಗಳ ನಡೆಯ ವಿರುದ್ದ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನೆಲ್ಲಿದಡಿ ಗುತ್ತು ಉಳಿಸಿ ಹೆಸರಿನಲ್ಲಿ ಭಾರೀ ಅಭಿಯಾನ ಆರಂಭವಾಗಿದೆ.

ಸಂಕ್ರಮಣ ಸೇವೆ ಆಗದೇ ಇದ್ದರೆ ತೊಂದರೆಯಿದೆ: ಇನ್ನು ಆಚರಣೆ ನಿರ್ಬಂಧದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ನೆಲ್ಲಿದಡಿ ಗುತ್ತುವಿನ ಯಜಮಾನ ಲಕ್ಷ್ಮಣ ಚೌಟ ಹೇಳಿಕೆ ನೀಡಿದ್ದಾರೆ. ಸಂಕ್ರಮಣ ಸೇವೆ ಆಗದೇ ಇದ್ದರೆ ಏನಾಗುತ್ತೆ ಅಂತ ಹೇಳಲು ಸಾಧ್ಯವಿಲ್ಲ, ಅಷ್ಟು ತೊಂದರೆಯಿದೆ ಎಂದಿದ್ದಾರೆ. ಎಸ್ಇಝಡ್ನವರು, ಅಲ್ಲಿನ ಕಂಪೆನಿಯವರಿಗೆ ಎಲ್ಲಾ ವಿಷಯ ಗೊತ್ತಿದೆ, ಕಷ್ಟಗಳನ್ನ ಅನುಭವಿಸಿಯೂ ಹೀಗೆ ಮಾಡ್ತಾ ಇದಾರೆ. ಈ ಹಿಂದೆ ಭೂ ಸ್ವಾಧೀನ ಆದಾಗಲೂ ದೈವವೇ ನಮಗೆ ಚಾವಡಿ ಬಿಟ್ಟು ಹೋಗಬೇಡ ಅಂದಿತ್ತು. ಹಾಗಾಗಿ ನಾನು ಹೋಗಿಲ್ಲ, ಸತ್ತರೂ ಅಲ್ಲೇ ಸಾಯುತ್ತೇನೆ ಅಂತ ಆ ಜಾಗ ಬಿಡಲೇ ಇಲ್ಲ. ಇದ್ದಬದ್ದವರನ್ನು ಕಾಡಿಬೇಡಿ ನಾವು ಇಷ್ಟರ ತನಕ ಅಲ್ಲಿ ದೈವಾರಾಧನೆ ಮಾಡಿದ್ದೇವೆ. ಇನ್ನು ಮಾಡಲು ಅಸಾಧ್ಯ ಅಂತ ಅವರು ಹೇಳುವಾಗ ನಾವು ಏನು ಮಾಡೋದು ಕಂಪೆನಿ ಒಳಗಡೆ ಮೂರು ಮೂರು ಸಲ ಬೆಂಕಿ ಬಿದ್ದಿದೆ.

ಆದರೂ ಅವರಿಗೆ ಅರ್ಥ ಆಗಲ್ಲ. ಕಳೆದ ಸಂಕ್ರಮಣದ ದಿನ ನಮಗೆ ತಡೆ ಒಡ್ಡಿದ್ದಾರೆ, ಅಲ್ಲಿಗೆ ಹೋಗಲು ಬಿಡಲ್ಲ ಅಂತ ಗೇಟ್ನಲ್ಲಿ ನಿಲ್ಲಿಸಿದ್ದಾರೆ. ಮಾರ್ಚ್, ಎಪ್ರಿಲ್ನಲ್ಲಿ ಅಲ್ಲಿ ಚಾವಡಿ ನೇಮ, ಬಂಡಿ ಉತ್ಸವಗಳು ನಡೆಯುತ್ತೆ, ಅದಕ್ಕೆ ಏನ್ ಮಾಡೋದು? ನಮಗೆ ಯಾವ ಅಧಿಕಾರಿಯನ್ನ ಸಂಪರ್ಕಿಸಿದ್ರೂ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಡಿಸಿ, ಎಸಿ, ಎಂಪಿ, ಎಂಎಲ್ಎ ಯಾರನ್ನ ಭೇಟಿಯಾದ್ರೂ ಆಚರಣೆಗೆ ಅನುಮತಿ ಸಿಕ್ಕಿಲ್ಲ. ದೈವಸ್ಥಾನದ ಜಾಗ ಕೈಗಾರೀಕರಣದ ಮಧ್ಯೆಯೂ ಅಲ್ಲಿ ಉಳಿದಿದೆ, ಆದರೆ ಈಗ ಆಚರಣೆಗೆ ಸಮಸ್ಯೆ ಬಂದಿದೆ. ಜನರ ಭಾವನೆಗಳ ಮೇಲೆ ಆಟವಾಡಿ ಕೈಗಾರೀಕರಣ, ಅಭಿವೃದ್ದಿ ನಮಗೆ ಬೇಡವೇ ಬೇಡ. ಎಸ್ಇಝಡ್ ಅಧಿಕಾರಿಗಳು, ಸ್ಥಳೀಯ ಜಿಲ್ಲಾಡಳಿತ ನೆಲ್ಲಿದಡಿಗುತ್ತು ದೈವಾರಾಧನೆ ನಿಲ್ಲಿಸಬಾರದು. ಈಗ ಅಧಿಕಾರಿಗಳು ತಡೆ ಒಡ್ಡಿದ ಕಾರಣದಿಂದ ಗ್ರಾಮದ ಜನರಿಗೆ ದೈವದ ಪ್ರಸಾದ ಸಿಗದಂತೆ ಆಗಿದೆ ಎಂದಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments