ಕಾನೂನು ಉಲ್ಲಂಘಿಸಿ ಮೀನುಗಾರಿಕೆ ಮಾಡುತ್ತಿರುವ ಬೃಹತ್ ಯಾಂತ್ರಿಕೃತ ಬೋಟುಗಳ ವಿರುದ್ದ ಕ್ರಮಕ್ಕೆ ಮನವಿ
ಉಡುಪಿ: ಮಲ್ಪೆ ತೀರ ಪ್ರದೇಶದಲ್ಲಿ ಕಾನೂನು ಬಾಹಿರ ಮೀನುಗಾರಿಕೆ ಮಾಡುತ್ತಿರುವ ಬೃಹತ್ ಗಾತ್ರದ ಯಾಂತ್ರಿಕ ಬೋಟುಗಳಿಗೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಬೇಸಿಗೆ ನಾಡದೋಣಿ ಮೀನುಗಾರರ ಸಂಘಮಲ್ಪೆ ಇವರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ನೀಡಲಾಯಿತು.
ಮಂಗಳೂರು ಭಾಗದ ಆಳ ಸಮುದ್ರದ ಬೃಹತ್ ಗಾತ್ರದ ಯಾಂತ್ರಿಕೃತ ಬೋಟುಗಳು ಮಲ್ಪೆ ಪರಿಸರದ ತೀರ ಪ್ರದೇಶದ 4-5 ಮಾರುಗಳಲ್ಲಿ ಬೃಹತ್ ಗಾತ್ರದ ಬಲೆಗಳನ್ನು ಉಪಯೋಗಿಸಿ ಹಗಲು ರಾತ್ರಿ ಮೀನುಗಾರಿಕೆ ಮಾಡುವುದರಿಂದ ಸಾಂಪ್ರಾದಾಯಿಕ ಬಡ ನಾಡ ದೋಣಿ ಮೀನುಗಾರರು ಮೀನು ಇಲ್ಲದೆ ಬರಿಗೈಯಲ್ಲಿ ವಾಪಾಸು ಬರಬೇಕಾಗುತ್ತದೆ.
ಸರಕಾರದ ಆದೇಶವಿದ್ದರೂ ಯಾಂತ್ರಿಕ ಬೋಟುಗಳು ಕಾನೂನು ಉಲ್ಲಂಘಿಸಿ ಅಕ್ರಮ ಮೀನುಗಾರಿಕೆ ಮಾಡುತ್ತಿರುವುದರಿಂದ ಅನಾದಿ ಕಾಲದಿಂದಲೂ ತೀರ ಪ್ರದೇಶದಲ್ಲಿ ಮೀನುಗಾರಿಕೆಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರು ಆತಂಕ ಪಡುವಂತಾಗಿದೆ. ಆದ್ದರಿಂದ ಕಾನೂನು ಬಾಹಿರ ಮೀನುಗಾರಿಕೆ ಮಾಡುತ್ತಿರುವ ಬೃಹತ್ ಗಾತ್ರದ ಯಾಂತ್ರಿಕ ಬೋಟುಗಳಿಗೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷರಾದ ಚಂದ್ರಕಾಂತ್ ಕರ್ಕೇರಾ, ಉಪಾಧ್ಯಕ್ಷ ಪ್ರವೀಣ್ ಶ್ರೀಯಾನ್, ಕಾರ್ಯದರ್ಶಿ ರತ್ನಾಕರ ಮೆಂಡನ್, ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಲಕ್ಷ್ಮೀನಾರಾಯಣ, ಹರೀಶ್ ತಿಂಗಳಾಯ ಹಾಗೂ ಇತರರು ಉಪಸ್ಥಿತರಿದ್ದರು.