ಕಾನೂನು ಪ್ರಕ್ರಿಯೆ ಜೊತೆ ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ; ಎಸ್ಪಿ ಲಕ್ಷ್ಮಣ್ ನಿಂಬರಗಿ
ಕುಂದಾಪುರ: ಮಾದಕ ವ್ಯಸನ ವಿರೋಧಿ ಮಾಸಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಕುಂದಾಪುರ ಉಪವಿಭಾಗ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇತರ ಸಂಘಸಂಸ್ಥೆಗಳ ಆಶ್ರಯದಲ್ಲಿ ಕುಂದಾಪುರ ನಗರದಲ್ಲಿ ಸೈಕಲ್ ಜಾಥಾ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು.
ಶಾಸ್ತ್ರಿ ಸರ್ಕಲ್ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸುಮಾರು 20 ಕಿಲೋಮೀಟರಿಗೂ ಅಧಿಕ ದೂರಗಳ ಕಾಲ ಸೈಕಲ್ ಜಾಥಾದಲ್ಲಿ ಸುಮಾರು . ಇನ್ನೂರಕ್ಕೂ ಅಧಿಕ ಮಂದಿ ಪ, ಕುಂದಾಪುರ ಚರ್ಚ್ ರಸ್ತೆ ಮಾರ್ಗವಾಗಿ ಎಮ್ ಕೋಡಿ, ಕೋಡಿ ಹಳೆಅಳಿವೆ, ಕೋಟೇಶ್ವರ ದೇವಸ್ಥಾನದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಬಳಿಕ ಕುಂದಾಪುರ ಬೋರ್ಡ್ ಹೈಸ್ಕೂಲಿನಲ್ಲಿ ಜಾಥಾ ಸಮಾಪ್ತಿಗೊಂಡಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಕೇವಲ ಪೊಲೀಸ್ ಇಲಾಖೆಯಿಂದ ಹಾಗೂ ಕಾನೂನಿನಿಂದ ನಾವು ಇದನ್ನು ತಡೆಗಟ್ಟಬಹುದು ಎನ್ನುವುದು ಶುದ್ದ ಸುಳ್ಳು. ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲ್ಲಿ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದರ ಭಾಗವಾಗಿಯೇ ಸೈಕಲ್ ಈ ಜಾಥಾ ಎಂದರು.
ಮುಕ್ಕಾಲು ಭಾಗ ಜನಸಂಖ್ಯೆ ಯುವಕರಿಂದ ಕೂಡಿರುವ ನಮ್ಮ ದೇಶದಲ್ಲಿ ಇಂದು ಮಾದಕ ದ್ರವ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಯುವಕರೆ ಹೆಚ್ಚು ಬಲಿಯಾಗುತ್ತಿರುವುದು ಖೇದಕರ. ನಮ್ಮ ದೇಶದ ಮುಂದಿನ ಬೆಳವಣಿಗೆ ಯುವಶಕ್ತಿಯ ಮೇಲೆ ಅವಲಂಬಿತವಾಗಿದೆ. ನಮ್ಮ ದೇಶದ ಮೇಲೆ ವೈರಿ ದೇಶ ದಾಳಿ ಮಾಡಿದರೆ ನಮಗೆ ಸೈನ್ಯ ಬಲ ಇದೆ. ಮಾದಕ ದ್ರವ್ಯ ಕಣ್ಣಿಗೆ ಕಾಣದೆ ಯುವಜನತೆಯ ಮೇಲೆ ದಾಳಿಗಳನ್ನು ಮಾಡುತ್ತಿದೆ. ಕಣ್ಣಿಗೆ ಕಾಣದೆ ಆಂತರಿಕವಾಗಿ ನಡೆಯುತ್ತಿರುವ ಈ ದಾಳಿಯನ್ನು ನಾವು ತಡೆಗಟ್ಟಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಹೇಳಿದರು.
ಕುಂದಾಪುರ ಸಹಾಯಕ ಅಯುಕ್ತ ಭೂಬಾಲನ್ ಮಾತನಾಡಿ ಕೇವಲ ಮಾದಕ ವಸ್ತುಗಳ ಸಾಗಣೆ, ಮಾದಕ ವ್ಯಸನಿಗಳ ವಿರುದ್ಧ ಕ್ರಮಕೈಗೊಳ್ಳುವುದೇ ಪೊಲೀಸರ ಕೆಲಸವಲ್ಲ ಬದಲಾಗಿ ಪೋಲಿಸ್ ಇಲಾಖೆಯ ಜೊತೆ ಸಾರ್ವಜನಿಕರೂ ಸಹ ಕೈ ಜೋಡಿಸಬೇಕಾಗಿದೆ. ಆದ್ದರಿಂದ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ಯುವ ಸಮೂಯ ಮಾದಕ ವ್ಯಸನಕ್ಕೆ ಬಲಿಯಾಗುವುದರಿಂದ ದೇಶದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಸುಭದ್ರ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ವ್ಯಸನ ಮುಕ್ತ ವಾತಾವರಣ ಸೃಷ್ಟಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಿದೆ ಎಂದರು.
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಡಿವೈಎಸ್ಪಿ ಬಿಪಿ ದಿನೇಶ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಪರಮೇಶ್ವರ ಗುನಗಾ, ಕುಂದಾಪುರ ಪಿಎಸ್ಐ ಹರೀಶ್ ಆರ್, ಕಂಡ್ಲೂರು ಪಿಎಸ್ಐ ಶ್ರೀಧರ ನಾಯ್ಕ್, ಬೈಂದೂರು ಪಿಎಸ್ಐ ತಿಮ್ಮೇಶ್ ಬಿಎನ್, ಗಂಗೊಳ್ಳಿ ಪಿಎಸ್ಐ ವಾಸಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳು, ಜಿಲ್ಲಾ ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಮೈಕಲ್ ಸಾಸ್ತಾನ, ಕುಂದಾಪುರ ಪತ್ರಕರ್ತರು, ಕುಂದಾಪುರ ಸೈಕಲ್ ಕ್ಲಬ್ ಹಾಗೂ ಸಾರ್ವಜನಿಕರು ಸೈಕಲ್ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ದಾರಿಯೂದ್ದಕ್ಕೂ ಸಾರ್ವಜನಿಕರು ಜಾಥಾದಲ್ಲಿ ದಣಿದು ಬಂದವರಿಗೆ ತಂಪುಪಾನೀಯ, ಮಜ್ಜಿಗೆ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ನೀಡಿ ಹುರಿದುಂಬಿಸಿದರು. ಚಕ್ರಮ್ಮ ದೇವಸ್ಥಾನ, ಎಂ ಕೋಡಿ ಫ್ರೆಂಡ್ಸ್, ಕೋಟಿ ಚನ್ನಯ್ಯ ಮಿತ್ರ ಮಂಡಳಿ ಮೊದಲಾದ ಸಂಘ ಸಂಸ್ಥೆಗಳು ತಂಪು ಪಾನೀಯ ನೀಡಿ ಪ್ರೋತ್ಸಾಹಿಸಿದೆ.
ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಚಿಣ್ಣರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಲಕ್ಕಿ ಕೂಪನ್ ನೀಡಲಾಗಿದ್ದು, ಲಕ್ಕಿ ಕೂಪನ್ ಡ್ರಾದಲ್ಲಿ ಉದಯ ಜ್ಯುವೆಲ್ಲರ್ಸ್ ನೀಡಿರುವ ಸೈಕಲ್ ಪುಟಾಣಿ ಪೂರ್ವಿ ಗೆ ಒಲಿದಿದೆ.