ಕಾಪು: ಇಲ್ಲಿಗೆ ಸಮೀಪದ ಮೂಳೂರು ಗ್ರಾಮದ ಕುಟುಂಬಿಕರ ತಂಡವೊಂದು ಟೆಂಪೋ ಟ್ರಾವೆಲರ್ನಲ್ಲಿ ಬೆಂಗಳೂರಿಗೆ ಶುಭ ಕಾರ್ಯಕ್ಕಮಕ್ಕೆಂದು ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿ, ಅದರಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮಕ್ಕಳು ಮಹಿಳೆಯರು ಸೇರಿ 13ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡ ಘಟನೆ ಬೆಂಗಳೂರು ಸಮೀಪದ ನೆಲಮಂಗಳದಲ್ಲಿ ಸಂಭವಿಸಿದೆ.
ಮೂಳೂರು ತಾರಿಬೆಟ್ಟು ದಿ. ಅಣ್ಣಯ್ಯರ ಪೂಜಾರಿಯವರ 7ರಲ್ಲಿ 6ನೇ ಮಗಳು ದೀಪಶ್ರೀಯವರ ಸೀಮಂತ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಗದಿ ಆಗಿತ್ತು. ಆಪ್ರಯುಕ್ತ ಕಾಪುವಿನ ಟೆಂಪೋ ಟ್ರಾವೆಲರ್ವೊಂದನ್ನು ಗೊತ್ತು ಪಡಿಸಿ ಕುಟುಂಬದ ಸದಸ್ಯರೆಲ್ಲರೂ ಮಂಗಳವಾರ ಸಂಜೆ ಪ್ರಯಾಣ ಬೆಳೆಸಿದ್ದರು. ಬೆಳಿಗ್ಗೆ 5ಗಂಟೆಯವರೆಗೆ ಪ್ರಯಾಣ ಸುಖಕರವಾಗಿದ್ದು, ಬೆಳಗ್ಗಿನ ಜಾವ ಪ್ರಯಾಣಿಕರೆಲ್ಲರೂ ಸುಖನಿದ್ರೆಯಲ್ಲಿದ್ದರು. ಇದೇ ವೇಳೆ ಬೆಂಗಳೂರು ಸಮೀಪದ ನೆಲಮಂಗಳ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದು, ಆ ಲಾರಿಗೆ ಟೆಂಪೋ ಟ್ರಾವೆಲರ್ ಚಾಲಕ ನಿದ್ದೆಯ ಮಂಪರಿನಿಂದ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಎದುರಿನ ಸೀಟಿನಲ್ಲಿದ್ದ ದೀಪಶ್ರೀಯವರ ಇಬ್ಬರು ಸಹೋದರಿಯ ಗಂಡಂದಿರಾದ ನಾಗೇಶ್ ಯಾನೆ ನವೀನ್(44) ಮತ್ತು ಕರಂದಾಡಿಯ ಅಟೋ ಚಾಲಕ ಉಮೇಶ್(38) ಸ್ಥಳದಲ್ಲಿಯೇ ಧಾರುಣವಾಗಿ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲರ್ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಇನ್ನುಳಿದಂತೆ ಚಾಲಕ, ಮಕ್ಕಳು ಸಹಿತ 13 ಮಂದಿ ತೀವ್ರಗಾಯಗೊಂಡಿದ್ದು, ದೀಪಶ್ರೀಯವರ ಸಹೋದರಿಯೋರ್ವರು ಚಿಂತಾಜನಕ ಸ್ಥಿತಿಯಲ್ಲಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೊರಕೆ, ಖಾದರ್ ಭೇಟಿ: ಅಪಘಾತ ನಡೆದ ಸುದ್ದಿ ತಿಳಿದ ಕೂಡಲೇ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹಾಗೂ ಆರೋಗ್ಯ ಸಚಿವ ಯುಟಿ ಖಾದರ್ ಆಸ್ಪತ್ರೆಗೆ ತೆರಳಿ ಗಾಯಾಳುಗಿಗೆ ಸಾಂತ್ವನ ಹೇಳಿದ್ದು, ತುರ್ತು ಚಿಕಿತ್ಸೆ ಮಾಡುವಂತೆ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಪಘಾತದಲ್ಲಿ ಮೃತಪಟ್ಟ ನವೀನ್ ಮತ್ತು ಉಮೇಶ್ರವರ ಮೃತದೇಹವನ್ನು ತುರ್ತಾಗಿ ಹುಟ್ಟೂರಿಗೆ ಸಾಗಿಸುವಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಿದ್ದಾರೆ.
ನೆಲಮಂಗಳ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.