ಕಾಪು: ಕೋಟೆ ಗ್ರಾಮ ಪಂಚಾಯತ್ ಮತ್ತು ಸರಕಾರೇತರ ಸಂಸ್ಥೆಯಾಗಿರುವ ಭಾರತೀಯ ಸಹಾಯ ಸೇವಾದ ಸಹಯೋಗದಲ್ಲಿ ಕಟಪಾಡಿ – ಕೋಟೆ ಗ್ರಾಮದ ಮಟ್ಟುವಿನ ಬಡ ಕುಟುಂಬದ ಜ್ಯೋತಿ ಕೋಟ್ಯಾನ್ ಎಂಬವರಿಗೆ ಸುಮಾರು ಮೂರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಕೊಡಲಾದ ವಿನಯ ನಿಲಯ ಮನೆಯನ್ನು ನಗರಾಭಿವೃದ್ದಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹಸ್ತಾಂತರಿಸಿದರು.
ಮನೆ ನಿರ್ಮಿಸುವಲ್ಲಿ ಮುತುವರ್ಜಿ ವಹಿಸಿರುವ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಮತ್ತವರ ತಂಡ ಹಾಗೂ ಭಾರತ್ ನಿರ್ಮಾಣ ಸಂಸ್ಥೆಯ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ವಿನಯ ಕುಮಾರ್ ಸೊರಕೆ ಈ ಮನೆಗೆ ವಿನಯ ನಿಲಯ ಎಂದು ತನ್ನ ಹೆಸರಿಟ್ಟಿರುವುದನ್ನು ಉಲ್ಲೇಖಿಸಿದ ಅವರು ಈ ಮನೆಗೆ ಅಸಖಂಯಾಕ ಬಡವರಿಗೆ ಮನೆ ನೀಡಿದ ಇಂದಿರಾ ಗಾಂಧಿಯವರ ನೆನಪಿಗಾಗಿ ಪ್ರಿಯದರ್ಶಿನಿಲಯ ಎಂದು ಬದಲಾಯಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಅವರು ಇತರಿರಿಗಾಗಿ ಮನೆ ಕಟ್ಟಿಕೊಡುವ ಭಾಗ್ಯ ಎಲ್ಲರಿಗೂ ಬರುವುದಿಲ್ಲ ದುರ್ಬಲರಿಗೆ ಮನೆಯಾಸರೆ ಕಲ್ಪಿಸಿಕೊಡುವುದು ಪುಣ್ಯದ ಕೆಲಸವಾಗಿದ್ದು ಇಂತಹ ಕೆಲಸಗಳು ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರಬೇಕು ಆಗ ಸಮಾಜದ ಜನರಲ್ಲಿ ಸಮಾನತೆ ಮೂಡಿ ಬರಲು ಸಾಧ್ಯವಾಗುತ್ತದೆ ಎಂದರು.
ಕೋಟೆ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಬಂಗೇರ, ತಾ ಪಂ. ಸದಸ್ಯ ಗಿರೀಶ್ ಕುಮಾರ್, ಗ್ರಾಪಂ ಸದಸ್ಯರಾದ ಪ್ರಮೀಳಾ ಜತ್ತನ್ನ, ಗಣೇಶ್ ಕುಮಾರ್ ಮಟ್ಟು, ಕಾಂಗ್ರೆಸ್ ಮುಖಂಡರಾದ ಅಶೋಕ್ ಕೊಡವೂರು, ದಯಾನಂದ ಬಂಗೇರ, ಸುನಿಲ್ ಡಿ ಬಂಗೇರ, ಕೀಶೋರ್ ಅಂಬಾಡಿ, ರಾಜೇಶ್ ಕುಮಾರ್ ಅಂಬಾಡಿ, ಕಿರಣ್ ಕುಮಾರ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.