ಕಾಪು: ಬಹುಮಾನಕ್ಕೆ ಸೀಮಿತವಾಗದೆ ಪರಸ್ಪರ ಭಾಂಧವ್ಯ, ಸ್ನೇಹ ವೃದ್ದಿಯ ಸಂಕೇತವಾಗಿ ಕ್ರೀಡಾಕೂಟಗಳು ಮೂಡಿಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕಾಪುವಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕಾಪು, ಕರ್ನಾಟಕ ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಶನ್, ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಸಾಗರ ಸಂಗಮ 2015 ಪುರುಷರ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಟೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಆಯೋಜಿಸಿದ ಈ ಕ್ರೀಡೆ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಕಬಡ್ಡಿ ಪಂದ್ಯಾಟ ಉತ್ತಮ ಮಟ್ಟದ ಕ್ರೀಡಾ ಸಂಯೋಜನೆಯೊಂದಿಗೆ ಮೂಡಿಬಂದಿದೆ ಎಂದು ಶ್ಲಾಘಿಸಿದರು.
ಕಬಡ್ಡಿಯಲ್ಲಿ ಚಕ್ರವರ್ತಿ ಪ್ರಶಸ್ತಿ ವಿಜೇತ ಸಿಮಂತೂರು ಜಯರಾಮ ಶೆಟ್ಟಿ, ಸಂಸ್ಥೆ ಗೌರವಾಧ್ಯಕ್ಷ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಬಡ್ಡಿ ಅಂತರಾಷ್ಟ್ರೀಯ ತರಬೇತುದಾರ ಮಹಮ್ಮದ್ ಇಸ್ಮಾಯಿಲ್, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಗೌರವ್ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ತಾಪಂ ಅಧ್ಯಕ್ಷೆ ಸುನಿತಾ ನಾಯ್ಕ್, ಜಿಪಂ ಅಧ್ಯಕ್ಷೆ ಸವಿತಾ ಕೋಟ್ಯಾನ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್ ಯತೀಶ್ ಬೈಕಂಪಾಡಿ ಇನ್ನಿತರರು ಉಪಸ್ಥಿತರಿದ್ದರು