ಕಾಪು ತಾಲೂಕಿನಲ್ಲಿ ಅರಿವಿನ ಪಯಣ ಕಾರ್ಯಕ್ರಮ
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಉಡುಪಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಹಮ್ಮಿಕೊಂಡಿರುವ ಅರಿವಿನ ಪಯಣ ಸಪ್ತಾಹದ ಅಂಗವಾಗಿ ಇಂದು ಕಾಪು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಜರುಗಿದವು.
ಶಿರ್ವದ ಹಿಂದೂ ಪ್ರೌಢಶಾಲೆ,ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಮತ್ತು ಶಂಕರಪುರ ಸೈಂಟ್ ಜಾನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಒಕ್ಕೂಟದ ಸದಸ್ಯರು ಮತ್ತು ಸಂಪನ್ಮೂಲ ವ್ಯಕ್ತಿಗಳೂ ಆಗಿರುವ ಅಖಿಲಾ ಬೆಂಗಳೂರು, ಪ್ರಭಾ ಬೆಳವಂಗಲ,ಲಿನೆಟ್ ಧಾರವಾಡ,ಗೌರಿ ಬೆಂಗಳೂರು,ಮಲ್ಲಿಕಾ ಮತ್ತು ಲಾವಣ್ಯ ಭಾಗವಹಿಸಿದ್ದರು.
ಶಿರ್ವದ ಹಿಂದೂ ಪ್ರೌಢಶಾಲೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ||ವೈ ಭಾಸ್ಕರ್ ಶೆಟ್ಟಿ ಯವರು ಒಕ್ಕೂಟದ ಈ ಕಾರ್ಯವನ್ನು ಶ್ಲಾಘಿಸಿದರು ಅರಿವನ್ನು ಯುವಜನತೆಯಲ್ಲಿ ಮೂಡಿಸುವುದು ಇಂದಿನ ಬಹುದೊಡ್ಡ ಅಗತ್ಯವಾಗಿದ್ದು, ಒಕ್ಕೂಟದ ಸದಸ್ಯರು ಈ ನಿಟ್ಟಿನಲ್ಲಿ ಅತ್ಯುತ್ತಮ ಪ್ರಯತ್ನ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಹಿಂದೂ ಪದವಿ ಕಾಲೇಜ್ ನ ಪ್ರಾಂಶುಪಾಲರಾದ ಭಾಸ್ಕರ್ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿ ಸಮಯೋಚಿತವಾಗಿ ಮಾತನಾಡಿದರು.
ಪಡುಬೆಳ್ಳೆಯ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಜಿನರಾಜ್.ಸಿ.ಸಾಲಿಯಾನ್ ಅವರು ದೌರ್ಜನ್ಯ ಪ್ರಕರಣಗಳು ಕೇವಲ ಹೆಣ್ಣಿನ ಮೇಲೆ ಮಾತ್ರವಲ್ಲ,ಪುರುಷರು ಮೇಲೂ ನಡೆಯುತ್ತಿವೆ.ಆದರೆ ತಮ್ಮ ಮೇಲೆ ದೌರ್ಜನ್ಯ ನಡೆದಾಗ ಮೌನವಾಗಿ ಸಹಿಸಿಕೊಂಡಿರದೇ ಪ್ರತಿಭಟಿಸುವ ಧೈರ್ಯ, ಸ್ಥೈರ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಅತೀ ಅಗತ್ಯ.ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮುಂದಾಗಿರುವುದು ಪ್ರಶಂಸನೀಯ ಎಂದರು.
ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಉಷಾ ಅವರು ಧನ್ಯವಾದವಿತ್ತರು.ಸಂಸ್ಥೆಯ ಎರಡೂ ಮಾಧ್ಯಮಗಳ ಶಿಕ್ಷಕರು ಮತ್ತು ಶಿಕ್ಷಕೇತರ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಂಕರಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುರ್ಕಾಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮಾರ್ಗರೇಟ್ ಸೀಮಾ ಡಿ’ಸೋಜ ಅವರು ಸಮಾಜದಲ್ಲಿ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬೇಕಾದರೆ ಮಹಿಳೆಯರು ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.ನಾವು ಮೌನವಾಗಿರುವಷ್ಟು ಕಾಲ ಈ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ ಎಂದರು.
ಸಂಸ್ಥೆಯ ಸಂಯೋಜಕರಾದ ವಂದನೀಯಗುರು ವಿಜಯ್ ಡಿಸೋಜಾ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪ್ರಿಯಾ .ಕೆ.ಡೇಸಾ, ಕಟಪಾಡಿ ಗ್ರಾಮಪಂಚಾಯತ್ ಸದಸ್ಯೆ ಆಗ್ನೆಸ್ ಡೇಸಾ, ಕುರ್ಕಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನತಾಲಿಯಾ ಮಾರ್ಟಿಸ್, ಸಂಸ್ಥೆಯ ಶಿಕ್ಷಕಿ ಅಸುಂತಾ ದಾಂತಿ ಮುಂತಾದವರು ಉಪಸ್ಥಿತರಿದ್ದರು.
ಈ ಮೂರೂ ಕಾರ್ಯಕ್ರಮಗಳನ್ನು ಶಿರ್ವದ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಗೀತಾ ವಾಗ್ಳೆ ಅವರು ಸಂಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಾಡುಗಳು ,ಕತೆ ಹಾಗೂ ಕಿರು ನಾಟಕ ಹಾಗೂ ಸಂವಾದಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗಿದವು.