ಕಾಪು ತಾಲೂಕು ರಚನೆ ಬೇಡಿಕೆ ಸಕಾರಾತ್ಮಕ ಸ್ಪಂದನೆ: ವಿನಯ್ ಕುಮಾರ್ ಸೊರಕೆ
ಕಾಪು : ಕಾಪು ತಾಲೂಕು ರಚನೆ ಬೇಡಿಕೆಯುಳ್ಳ ಮನವಿಯನ್ನು ಈಗಾಗಲೇ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ನೀಡಲಾಗಿದ್ದು, ಮುಂದಿನ ಬಜೆಟ್ ನಲ್ಲಿಯೇ ಕಾಪು ತಾಲೂಕು ಘೋಷಿಸುವಂತೆ ಆಗ್ರಹಿಸಲಾಗಿದೆ. ಎರಡೂ ಕಡೆಗಳಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಮಂಗಳವಾರ ಕಾಪು ಬಂಗ್ಲೆ ಮೈದಾನದಲ್ಲಿ ಸುಮಾರು 5 ಕೋ ರೂ ವೆಚ್ಚದಲ್ಲಿ ಕಾಪು ಪರುಸಭೆಯ ಕಟ್ಟಡ ರಚನೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಒಂದೂ ಪೌರಾಡಳಿತ ಸಂಸ್ಥೆಯೂ ಇಲ್ಲ ಎಂಬ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ಕಾಪು ಪುರಸಭೆಯನ್ನು ರಚಿಸಿ, ನಗರಾಭಿವೃದ್ಧಿ ಇಲಾಖೆಯ ಮೂಲಕ ಅನುದಾನವನ್ನು ಕ್ರೋಡಿಕರಿಸಿ ಅಭಿವೃದ್ಧಿಗೆ ಪ್ರಯತ್ನಿಸಲಾಗಿತ್ತು. ಅಂದೇ ರೂ 5 ಕೋಟಿ ಕಟ್ಟಡ ರಚನೆಗೂ ಅನುದಾನವನ್ನು ಮೀಸಲಿಡಲಾಗಿದ್ದು ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ನೂತನ ಪುರಸಭೆ ಕಟ್ಟಡವನ್ನು ಸರಕಾರಿ ಕಚೇರಿಗೆ ಮಾತ್ರ ಸೀಮಿತವಾಗಿಸಲದೆ ಸರಕಾರಿ ಕಾಂಪ್ಲೆಕ್ಸ್ ಮಾದರಿಯಲ್ಲಿ ಒಂದು ವರ್ಷದೊಳಗೆ ನಿರ್ಮಿಸುವ ಭರವಸೆ ಸಿಕ್ಕಿದೆ. ಮುಂದೆ ಇದೇ ಪ್ರದೇಶದಲ್ಲಿ ಕಾಪು ತಾಲೂಕು ಕಚೇರಿ, ಮಿನಿ ವಿಧಾನಸೌಧ ರಚನೆ, ತೋಟಗಾರಿಕಾ ಪಾರ್ಕ್ ನಿರ್ಮಾಣಕ್ಕೂ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಿಎಸ್ ಆರ್ ಯೋಜನೆಯಡಿ ರೂ 47.50 ಕೋಟಿ, ಕಾಪು ಪುರಸಭಾವ್ಯಾ್ಪತಿಗೆ ನಗರೋತ್ಥಾನ ಅಡಿಯ 10 ಕೋಟಿ, ತ್ಯಾಜ್ಯ ವಿಲೇವಾರಿಗೆ 10 ಎಕರೆ ಜಾಗ ಸಹಿತವಾಗಿ 7.50 ಕೋಟಿ ಅನುದಾನ, ಎಸ್ಸಿ/ಎಸ್ಟಿ ಯೋಜನೆಯಡಿ ರೂ 5 ಕೋಟಿ, ಸ್ಮಶಾನ, ಪಾರ್ಕ್ ಮತ್ತು ಕೆರೆ ಅಭಿವೃದ್ಧಿಗೆ ರೂ 5 ಕೋಟಿ ಬಿಡುಗಡೆಯಾಗಿದೆ. ಯುಜಿಡಿ ಅನುಷ್ಟಾನಕ್ಕೆ 35 ಕೋಟಿ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನಗೆ 70 ಕೋಟಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂಧರು.