ಕಾಪು : ಕಾಪು ಸಮೀಪದ ಪಾದೂರಿನಲ್ಲಿ ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್ಪಿಆರ್ಎಲ್ ಸಂಸ್ಥೆಗೆ ಹೈಟೆನ್ಶನ್ ವಿದ್ಯುತ್ ಮಾರ್ಗಕ್ಕೆ ನಂದಿಕೂರು-ಪಾದೂರಿನಲ್ಲಿ ಬುಧವಾರ ಸರ್ವೆ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತಾದರೂ ಸ್ಥಳೀಯರ ವಿರೋಧದ ಹಿನ್ನಲೆಯಲ್ಲಿ ಸರ್ವೆ ಕಾರ್ಯ ಕೈಬಿಟ್ಟ ಘಟನೆ ನಡೆದಿದೆ.
ಪಾದೂರಿನಲ್ಲಿರುವ ಐಎಸ್ಪಿಆರ್ಎಲ್ ಸಂಸ್ಥೆಗೆ ಸಂಬಂಧಿಸಿ 110 ಕೆವಿ ಹೈಟೆನ್ಶನ್ ಲೈನ್ ಸಂಪರ್ಕಕ್ಕಾಗಿ ನಂದಿಕೂರು-ಪಾದೂರು ಸರ್ವೆ ನಡೆಸಲು ಕಂಪೆನಿ ಮುಂದಾಗಿತ್ತು. ಆದರೆ ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವೆ ಕಾರ್ಯವನ್ನು ಮುಂದೂಡುತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಉಡುಪಿ ತಹಶೀಲ್ದಾರ್ರವರ ಮೂಲಕ ಕಳತ್ತೂರು ಗ್ರಾಮದ ಸಂತ್ರಸ್ತ ಕುಟುಂಬಕ್ಕೆ ನೋಟೀಸು ನೀಡಿ ಎಪ್ರಿಲ್ 29ರಂದು ಸರ್ವೆ ಕಾರ್ಯ ನಡೆಸುವುದಾಗಿ ತಿಳಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡಿ ಯಾವುದೇ ಕಾರಣಕ್ಕೂ ಸರ್ವೆ ಕಾರ್ಯ ನಡೆಸಬಾರದು ಎಂದು ಹೇಳಿತ್ತು. ಆದರೆ ಜಿಲ್ಲಾಡಳಿತ ಸರ್ವೆ ಕಾರ್ಯವನ್ನು ಮಾಡಿಯೇ ಸಿದ್ಧ ಎಂದು ಈ ವೇಳೆ ಹೇಳಿತ್ತು. ಇದಕ್ಕಾಗಿ ಸರ್ವೆ ನಡೆಸುವ ವೇಳೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಸಿದ್ದತೆ ನಡೆದಿತ್ತು. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಸರ್ವೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಸರ್ವೆ ನಡೆಸಲು ಪೊಲೀಸ್ ಬಂದೋಬಸ್ತ್ನಲ್ಲಿ ಜಿಲ್ಲಾಡಳಿತ ಬುಧವಾರ ಸಜ್ಜಾಗುತ್ತದೆ ಎಂಬ ಸುದ್ದಿ ತಿಳಿದ ಸ್ಥಳೀಯರು ಕುತ್ಯಾರು ಗ್ರಾಪಂ ಕಚೇರಿ ಬಳಿ ಜನ ಜಮಾಯಿಸಿದ್ದರು. ಆದರೆ ಸರ್ವೆ ನಡೆಸಲು ಜಿಲ್ಲಾಡಳಿತ ಸ್ಥಳೀಯರ ಪ್ರತಿಭಟನೆಯ ಹಿನ್ನಲೆಯಲ್ಲಿ ಮುಂದೂಡಿದೆ. ಬಳಿಕ ಸೇರಿದ್ದ ಜನರು ಕಳತ್ತೂರು ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಸೂಕ್ತ ಪರಿಹಾರ ನೀಡಿ: ಉಡುಪಿ ತಾಲೂಕು ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆಗಾಗಿ ಈ ಪರಿಸರದ ಜನರು ತ್ಯಾಗ ಮಾಡಿ ಭೂಮಿ ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಜನರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿದೆ. ಯಾವುದೇ ರೀತಿಯ ಪರಿಹಾರದ ಬಗ್ಗೆ ಮಾತುಕತೆ ನಡೆಸದೆ ಏಕಾಏಕಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಅಲ್ಲದೆ ವಿದ್ಯುತ್ ಟವರ್ ಅಳವಡಿಸುವ ಸ್ಥಳದ ಭೂ ಮಾಲೀಕರಿಗೆ ಮಾತ್ರವಲ್ಲದೆ ವಿದ್ಯುತ್ ಲೈನ್ ಹೋಗುವ ಮಾರ್ಗದ ಎಲ್ಲಾ ಕುಟುಂಬದವರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಜನಜಾಗೃತಿ ಸಮಿತಿಯ ಸಂಚಾಲಕ ಲೋರೆನ್ಸ್ ಫೆರ್ನಾಂಡೀಸ್, ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು, ನಿತ್ಯಾನಂದ ಶೆಟ್ಟಿ, ನವೀನ್ ಶೆಟ್ಟಿ, ಪ್ರವೀಣ್ ಶೆಟ್ಟಿ ಗುರ್ಮೆ, ಅಶೋಕ್ ಕುಮಾರ್, ಶಿವರಾಮ ಶೆಟ್ಟಿ, ದಿವಾಕರ ಶೆಟ್ಟಿ, ಚಿತ್ತರಂಜನ್ ಭಂಡಾರಿ ಉಪಸ್ಥಿತರಿದ್ದರು.