Home Mangalorean News Kannada News ಕಾರಿನಲ್ಲಿ ಶವ ಪತ್ತೆ ಪ್ರಕರಣ; ಚಿನ್ನದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡ ಮೂವರು

ಕಾರಿನಲ್ಲಿ ಶವ ಪತ್ತೆ ಪ್ರಕರಣ; ಚಿನ್ನದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡ ಮೂವರು

Spread the love

ಕಾರಿನಲ್ಲಿ ಶವ ಪತ್ತೆ ಪ್ರಕರಣ; ಚಿನ್ನದ ಆಸೆಗೆ ಬಿದ್ದು ಪ್ರಾಣ ಕಳೆದುಕೊಂಡ ಮೂವರು

ತುಮಕೂರು: ತಾಲೂಕಿನ  ಕುಚ್ಚಂಗಿ ಕೆರೆಯ ಬಳಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆಯಾದ  ಪ್ರಕರಣವು ಇದೀಗ ತಿರುವು ಪಡೆದುಕೊಂಡಿದೆ. ದಕ್ಷಿಣ ಕನ್ನಡ  ಜಿಲ್ಲೆಯ ಬೆಳ್ತಂಗಡಿ ಮೂಲದ ಮೂವರು ಚಿನ್ನದ ಆಸೆಗೆ ಬಿದ್ದು ತುಮಕೂರಿಗೆ ಹೋಗಿ ದರೋಡೆಕೋರರಿಂದ ಕೊಲೆಯಾದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಇಸಾಕ್ (56), ಸಾಹುಲ್ (45) ಮತ್ತು ಇಮ್ತಿಯಾಜ್ (34) ಹತ್ಯೆಯಾದವರಾಗಿದ್ದಾರೆ. ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಇಸಾಕ್​ಗೆ ದರೋಡೆಕೋರರು ತಮ್ಮ ಜಮೀನಿನಲ್ಲಿ ಕೃಷಿ ಮಾಡುವಾಗ ಚಿನ್ನದಹಂಡೆ ಸಿಕ್ಕಿದೆ ಅಂತ ನಕಲಿ ಚಿನ್ನವನ್ನು ತೋರಿಸಿ ಅದನ್ನು ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ನಂಬಿಸಿ ತಮಕೂರಿಗೆ ಕರೆಸಿಕೊಂಡಿದ್ದರು.

ದರೋಡೆಕೋರರ ಮಾತನ್ನು ನಂಬಿದ ಇಸಾಕ್, ಡೀಲ್ ಇದೆ ಬಾ ಅಂತಾ ತನ್ನ ಇಬ್ಬರು ಸ್ನೇಹಿತರಾದ ಸಾಹುಲ್ ಮತ್ತು ಇಮ್ತಿಯಾಜ್ ಅವರನ್ನು ಕರೆದಿದ್ದಾನೆ. ತುಮಕೂರು ಮೂಲದ ಸ್ವಾಮಿ ಎಂಬಾತನ ಪರಿಚಯದ ಮೂಲಕ ತುಮಕೂರಿಗೆ ಕಾರು ಮೂಲಕ ಹೋಗಿದ್ದರು. ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ ಇಸಾಕ್​ನ ಮೊಬೈಲ್ ಗುರುವಾರ ರಾತ್ರಿ ಸ್ವಿಚ್‌ ಆಫ್ ಆಗಿತ್ತು.

ಇನ್ನೊಂದೆಡೆ, ಮೂವರ ಶವ ಕಾರಿನಲ್ಲಿ ಪತ್ತೆಯಾಗಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಘಟನಾ ಸ್ಥಳದಲ್ಲಿದ್ದ ಕಾರಿನ ನಂಬರ್ ಆಧರಿಸಿ ಕಾರು ಮಾಲೀಕ ರಫೀಕ್ ಸಂಪರ್ಕ ಮಾಡಿದಾಗ ಇಸಾಕ್​ ಎಂಬಾತನಿಗೆ 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಮೃತರ ಗುರುತು ಪತ್ತೆಕಾರ್ಯ ಪೊಲೀಸರಿಗೆ ಸುಲಭವಾಯಿತು.

ಚಿನ್ನ ಖರೀದಿಗೆ ತಂದಿದ್ದ ಹಣ ದೋಚಲು ಮೂವರನ್ನು ಹತ್ಯೆ ಮಾಡಲಾಗಿದೆ. ನಕಲಿ ಚಿನ್ನ ತೋರಿಸಿ ಹಣ ದೋಚಲು ಮೂವರ ಮೇಲೆ ಹಲ್ಲೆಗೈದು ಕೈ, ಕಾಲು, ಕಟ್ಟಿಹಾಕಿ ಬೆಂಕಿ ಹಚ್ಚಿದ್ದರು. ಮೂವರ ಪೈಕಿ ಇಬ್ಬರ ಶವವನ್ನು ಕಾರಿನ ಡಿಕ್ಕಿಗೆ ಹಾಕಿದ್ದು, ಮತ್ತೊಬ್ಬನ ಶವವನ್ನು ಕಾರಿನ ಮಧ್ಯಭಾಗದಲ್ಲಿ ಇರಿಸಲಾಗಿತ್ತು. ಕೊಲೆ ವಿಚಾರ ತಿಳಿಯಬಾರದೆಂದು ಆರೋಪಿಗಳು ಕಾರಿಗೆ ಬೆಂಕಿ ಹಚ್ಚಿದ್ದರು. ಗುರುತು ಪತ್ತೆ ಹಚ್ಚಲು ಆಗದ ಸ್ಥಿತಿಯಲ್ಲಿ ಮೂವರ ದೇಹಗಳು ಸುಟ್ಟು ಹೋಗಿದ್ದವು.


Spread the love

Exit mobile version