Home Mangalorean News Kannada News ಕಾರ್ಕಳದಲ್ಲಿ 26ರಂದು ಮೂಡುಬಿದಿರೆ ಮಠದಿಂದ ಮಸ್ತಕಾಭಿಷೇಕ

ಕಾರ್ಕಳದಲ್ಲಿ 26ರಂದು ಮೂಡುಬಿದಿರೆ ಮಠದಿಂದ ಮಸ್ತಕಾಭಿಷೇಕ

Spread the love

ಕಾರ್ಕಳ: ಮೂಡಬಿದಿರೆ ಜೈನಮಠದಿಂದ ಕಾರ್ಕಳ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ ಏ.26ರಂದು ನಡೆಯಲಿದೆ ಎಂದು ಮೂಡಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.

ಅವರು ನಲ್ಲೂರು ಕೂಷ್ಮಾಂಡಿನಿ ಬಸದಿಯಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಗಲು ಮತ್ತು ರಾತ್ರಿಯಲ್ಲಿ ಮಸ್ತಕಾಭಿಷೇಕ ನಡೆಸಬೇಕು ಎಂಬುವುದು ಭಕ್ತರ ಅಪೇಕ್ಷೆ. ಆ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಅಗ್ರೋದಕ ಮೆರವಣಿಗೆ, 3.30ರಿಂದ 1008 ಕಲಶಾಭಿಷೇಕ ಅಭಿಷೇಕ, ರಾತ್ರಿ 7ರಿಂದ ಪಂಚದ್ರವ್ಯಾಭಿಷೇಕಗಳು ನಡೆಯಲಿದೆ. ಜೈನಧರ್ಮದ ಸಾಮಾನ್ಯ ಜನತೆಯು ಕಳಸಗಳನ್ನು ಖರೀದಿಸಿ ಸಮರ್ಪಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದ್ದು, ಅನ್ಯಧರ್ಮೀಯರು ಕೂಡಾ ಈ ಮಹಾನ್ ಕಾರ್ಯವನ್ನು ಆಸ್ವಾದಿಸಬೇಕು ಎನ್ನುವ ಉದ್ದೇಶವನ್ನು ಈ ಬಾರಿ ಇಟ್ಟುಕೊಂಡಿದ್ದೇವೆ. ಆಚಾರ್ಯ ಸಚ್ಚಿದಾನಂದ ಮುನಿ ಮಹಾರಾಜ್ ಮತ್ತು ಏಲಾಚಾರ್ಯ ನಿಜಾನಂದ ಮುನಿ ಮಹಾರಾಜ್ ಸೇರಿದಂತೆ ಇಬ್ಬರು ಮುನಿಗಳು ಹಾಗೂ ನಾನು ಸೇರಿದಂತೆ ಕಾರ್ಕಳ ಜೈನಮಠದ ಇಬ್ಬರು ಭಟ್ಟಾರಕರು ಈ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪರಂಪರೆಗೆ ಒತ್ತು ನೀಡುವ ಉದ್ದೇಶದಿಂದ ಕಾರ್ಕಳದ 18 ಬಸದಿಗಳಲ್ಲಿ ಗೋಷ್ಠಿಪೂಜೆ, ಕಾರ್ಕಳ, ನಲ್ಲೂರು ಹಾಗೂ ಮೂಡಬಿದಿರೆ ಮಠಗಳಲ್ಲಿ ಕೂಷ್ಮಾಂಡಿನಿ ದೇವಿಗೆ ಷೋಡೋಪಚಾರ ಪೂಜೆ ನಡೆಯಲಿದೆ. ಅಲ್ಲದೆ ಈ ಬಾರಿ ವಿಶೇಷ ಎಂಬಂತೆ ಕಾಶ್ಮೀರ ಕೇಸರದಿಂದ ಬಾಹುಬಲಿಗೆ ಅಭಿಷೇಕಗಳು ಜತೆಗೆ ಮಹಾಮಸ್ತಕಾಭಿಷೇಕದ ಸಂದರ್ಭ ನಡೆದ ಎಲ್ಲಾ ರೀತಿಯ ಅಭಿಷೇಕದ ಜತೆಗೆ ನವರತ್ನಗಳ ಅಭಿಷೇಕಗಳು ನಡೆಯಲಿದೆ. ಅಲ್ಲದೆ ದ್ರವ್ಯಗಳ ಪ್ರಮಾಣ ಕೂಡಾ ಹೆಚ್ಚಿದೆ ಎಂದರು. ಜತೆಗೆ ಬಾಹುಬಲಿಗೆ ದ್ರವ್ಯಾಭಿಷೇಕ ಮತ್ತು ಕಿವಿ,ಕಣ್ಣಿಗೆ ಇಂಪು ಕೊಡುವ ಕಾವ್ಯಾಭಿಷೇಕ(ಜೈನ ಧರ್ಮದ ಕುರಿತ ಗ್ರಂಥಗಳ)ವೂ ಈ ಸಂದರ್ಬ ನಡೆಯಲಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ಕೇರಳ, ತಮಿಳುನಾಡಿನಿಂದ ಭಕ್ತರು ಆಗಮಿಸಲಿದ್ದಾರೆ ಎಂದರು.

ಕಾರ್ಕಳ ಬಾಹುಬಲಿಯು ಧ್ಯಾನಮುದ್ರೆ ಇರುವ ಅಪರೂಪದ ಮೂರ್ತಿಯಾಗಿದ್ದು, ಪ್ರಸಕ್ತ ಸಾಲಿನ ಅಭಿಷೇಕದ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ನಡೆಯುವ ಈ ಕಾರ್ಯಕ್ರಮದ ಯಶಸ್ಸಿಗೆ ನೂರು ಜನ ಕಾರ್ಯಕರ್ತರು ಶ್ರಮಿಸಲಿದ್ದಾರೆ. 5ರಿಂದ 10 ಸಾವಿರ ಜನ ಆಗುವ ನಿರೀಕ್ಷೆಯಿದ್ದು, ಬಂದವರಿಗೆ ಆಸನ ಹಾಗೂ ಉಪಹಾರದ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸದಿಯ ಆಡಳಿತ ಮೊಕ್ತೇಸರ ವಜ್ರನಾಭ ಚೌಟ ಹಾಗೂ ಮಹಾವೀರ್ ಜೈನ್ ಉಪಸ್ಥಿತರಿದ್ದರು.


Spread the love

Exit mobile version