Home Mangalorean News Kannada News ಕಾರ್ಕಳ ಪೋಲಿಸರಿಂದ ಅಂತರ್‌ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ

ಕಾರ್ಕಳ ಪೋಲಿಸರಿಂದ ಅಂತರ್‌ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ

Spread the love

ಕಾರ್ಕಳ ಪೋಲಿಸರಿಂದ ಅಂತರ್‌ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ

ಕಾರ್ಕಳ: ಅಂತರ್ ಜಿಲ್ಲಾ ನಾಲ್ವರು ದರೋಡೆ ಕೋರರನ್ನು ಕಾರ್ಕಳ ಪೋಲಿಸರು ಬಂಧಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬೆಳಪುವಿನ ಸಾಜಿದ್ ರಹ್ಮಾನ್ (19), ಕಾರ್ಕಳ ಬಂಗ್ಲೆಗುಡ್ಡೆಯ ಅಮೀರುದ್ದೀನ್ ಯಾನೆ ಸದ್ದಾಂ (27), ಭಟ್ಕಳ ಉಸ್ಮಾನ್ ನಗರದ ಮಾರೂಫ (21), ಭಟ್ಕಳ ಸೋಡಿಗದ್ದೆಯ ನಟರಾಜ ಮೊಗೇರ (24) ಎಂದು ಗುರುತಿಸಲಾಗಿದೆ.

ಫೆಬ್ರವರಿ 4ರಂದ  ಮುಂಜಾನೆ 01.00 ಗಂಟೆಯ ಸಮಯದಲ್ಲಿ  ಕಾರ್ಕಳ ತಾಲೂಕು ಕಸಬಾ ಗ್ರಾಮದ  ಬಂಗ್ಲೆಗುಡ್ಡೆ ಎಂಬಲ್ಲಿ ಯಾರೋ 3 ಜನ ದುಷ್ಕರ್ಮಿಗಳು  ಯಶೋಧ ಆರ್.ಭಟ್ ಬಂಗ್ಲೆಗುಡ್ಡೆ, ಕಸಬ ಗ್ರಾಮ, ಕಾರ್ಕಳ ತಾಲೂಕು ರವರ ವಾಸದ ಮನೆಯ ಹಿಂಬದಿಯ ಬಾಗಿಲನ್ನು ಬಲವಾಗಿ ದೂಡಿ ತೆಗೆದು ಒಳಪ್ರವೇಶಿಸಿ ಕೊಠಡಿಯ ಒಳಗೆ ಮಲಗಿದ್ದ ಶ್ರೀಮತಿ ಯಶೋಧ ಆರ್.ಭಟ್, ಪ್ರಾಯ 58 ಹಾಗೂ ಅವರ ಗಂಡನಾದ ಸಂಜೀವ ನಾಯಕ್ ರವರ ಬಳಿ ಬಂದು ಕೂಗಾಡಲು ಪ್ರಯತ್ನಿಸಿದ ಆಕೆಯ ಗಂಡನಿಗೆ ಮನೆಯಲ್ಲಿದ್ದ ಕಾಯಿ ತುರಿಯುವ ಮಣೆಯಿಂದ ಬಲಭಾಗದ ಮುಖಕ್ಕೆ ಹಾಗೂ ಕಬ್ಬಿಣದ ರಾಡ್‌ನಿಂದ ಬಲಕಣ್ಣಿಗೆ ಹೊಡೆದು ಆಕೆಗೂ ಸಹ ಮುಖಕ್ಕೆ  ಹಲ್ಲೆ ಮಾಡಿ ಕೊಠಡಿಯ ಒಳಗೆ ಕಪಾಟಿನಲ್ಲಿಟ್ಟಿದ್ದ 21 ಪವನ್‌ ಚಿನ್ನಾಭರಣ  ಹಾಗೂ ನಗದು ಒಂದು ಲಕ್ಷ ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು.

ಈ ಪ್ರಕರಣದ ಪತ್ತೆ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ಬ. ನಿಂಬರಗಿರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ ಚಂದ್ರ ಕೆ.ಎಸ್.ಪಿ.ಎಸ್  ಹಾಗೂ  ಸಹಾಯಕ ಪೊಲೀಸ್ ಅಧೀಕ್ಷಕರು ಋಷಿಕೇಶ್  ಸೋನವಾಣೆ, ಐಪಿಎಸ್ ಕಾರ್ಕಳ ಉಪವಿಭಾಗ, ರವರುಗಳ  ಮಾರ್ಗದರ್ಶನದಲ್ಲಿ  ತನಿಖೆ ಪ್ರಾರಂಭಿಸಿ ಪ್ರಕರಣದ  ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕರಾದ ಜಾಯ್ ಅಂತೋನಿ  ನೇತೃತ್ವದಲ್ಲಿ, ಕಾರ್ಕಳ ನಗರ  ಠಾಣಾ  ಪಿ.ಎಸ್.ಐ ನಂಜಾನಾಯ್ಕ್‌, ಕಾರ್ಕಳ ವೃತ್ತ ಪೊಲೀಸ್ ಸಿಬ್ಬಂದಿಗಳು ಫೆಬ್ರವರಿ 12 ರಂದು ಖಚಿತ ಮಾಹಿತಿ ಮೇರೆಗೆ ಮೇಲ್ಕಂಡ ಪ್ರಕರಣದ ಆರೋಪಿಗಳಲ್ಲಿ ಇಬ್ಬರಾದ  ಸಾಜಿದ್‌ ರೆಹಮಾನ್‌  ಮತ್ತು ಅಮಿರುದ್ದೀನ್‌ ಯಾನೆ ಸದ್ದಾಂ  ಇವರನ್ನು ದಸ್ತಗಿರಿ ಮಾಡಿ ಇವರಿಂದ  ಕಳ್ಳತನ ಮಾಡಿಕೊಂಡು ಹೋಗಿರುವ ಹಣದಲ್ಲಿ ತಲಾ 3,500 ಮತ್ತು 3000 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿಚಾರಣೆಯಿಂದ ಈ ಪ್ರಕರಣದಲ್ಲಿ ಕೃತ್ಯಕ್ಕೆ ಚವರಲೇಟ್ ಕಂಪನಿಯ  ಕಾರು ಉಪಯೋಗಿಸಿರುವ ಬಗ್ಗೆ ಹಾಗೂ ಈ ಪ್ರಕರಣದಲ್ಲಿ ಇನ್ನೂ 4 ಆರೋಪಿಗಳು  ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಈ ಪ್ರಕರಣದಲ್ಲಿ ಉಳಿದ ಆರೋಪಿಗಳ  ಪತ್ತೆ ಕಾರ್ಯವನ್ನು  ಮುಂದುವರಿಸಿದ್ದು,  ದಿನಾಂಕ 15-02-2018  ಸಂಜೆ  ಈ ಡಕಾಯಿತಿ ಪ್ರಕರಣದ ಉಳಿದ ಆರೋಪಿಗಳು  ಮೂಡುಬಿದ್ರೆ ಕಡೆಗೆ ಕಾರ್ಕಳ ಮಾರ್ಗವಾಗಿ ಹೋಗುತ್ತಿರುವ ಬಗ್ಗೆ ಬಾತ್ಮಿದಾರರ ಖಚಿತ ಮಾಹಿತಿ ಬಂದ ಮೇರೆಗೆ  ಸಾಣೂರು ಮುರತಂಗಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ  ಕಾರನ್ನು ಪೊಲೀಸರ ಸಹಾಯದಿಂದ  ತಡೆದು ನಿಲ್ಲಿಸಿದ್ದು, ಆರೋಪಿಗಳಾದ  ಮಾರೂಫ, ಹಾಗೂ ನಟರಾಜ, ಇವರುಗಳನ್ನು ವಶಕ್ಕೆ ಪಡೆದಿದ್ದು,ಉಳಿದ 3 ಜನ ಆರೋಪಿಗಳು ಇಳಿದು ಮುರತಂಗಡಿ ಕಾಡಿನ ಕಡೆಗೆ ಓಡಿ ಹೋಗಿರುತ್ತಾರೆ. ಓಡಿ ಹೋದ ಆರೋಪಿಗಳ ಮಾಹಿತಿಯನ್ನು ಕೇಳಲಾಗಿ ಕಾಪು ಅಜರುದ್ದೀನ್, ಶರೀಫ್ ಶಿವಮೊಗ್ಗ ಹಾಗೂ ರಶೀದ್ ಕಾಸರಗೋಡು ಎಂಬುದಾಗಿ ಹೇಳಿರುತ್ತಾರೆ. ಸದರಿ ಆರೋಪಿಗಳಿಂದ ಕಾಪು, ಪಡುಬಿದ್ರಿ ಮತ್ತು ಕಾರ್ಕಳದಲ್ಲಿ 2017 ಹಾಗೂ 2018 ನೇ ಸಾಲಿನಲ್ಲಿ ಮಹಿಳೆಯರ ಕುತ್ತಿಗೆಯಿಂದ ಅಪಹರಣ ಮಾಡಿರುವ 3 ಚಿನ್ನದ ಸರಗಳು, ಕಾರ್ಕಳ ದರೋಡೆ ಪ್ರಕರಣದ ಓಂದು ಚಿನ್ನದ ಸರ ಮತ್ತು ಒಂದು ಬಳೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಚವರಲೇಟ್ ಕಂಪನಿಯ ಎಂಜಾಯ್ ಮಾದರಿಯ ಬೂದು ಬಣ್ಣದ ಕಾರು, ಒಂದು ಲಾಂಗು, ಒಂದು ಕತ್ತಿ, ಒಂದು ಕಬ್ಬಿಣದ ರಾಡು ಹಾಗೂ ನಗದು 6,500/- ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಒಟ್ಟು ಸ್ವತ್ತು ಮೌಲ್ಯ 8 ಲಕ್ಷ 80 ಸಾವಿರ ಆಗಿರುತ್ತದೆ.

ಮೇಲ್ಕಂಡ ಅಪರಾಧಗಳನ್ನು ಹೊರತು ಪಡಿಸಿ ಡಕಾಯಿತಿ ಪ್ರಕರಣದ 6 ಜನ ಆರೋಪಿಗಳಲ್ಲಿ ಕಾಪು ಅಜರುದ್ದೀನ್, ಮಾರೂಫ್ ಮತ್ತು ನಟರಾಜ ಇವರುಗಳು ಇತರ ಸಹಚರರೊಂದಿಗೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ 15 ಕಳ್ಳತನ ಪ್ರಕರಣಗಳಲ್ಲಿ ಭಾಗವಹಿಸಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.  ಆರೋಪಿಗಳನ್ನು 14 ದಿವಸದ ನ್ಯಾಯಾಂಗ ಬಂಧನಕ್ಕೆ  ನೀಡಿದ್ದು  ಇರುತ್ತದೆ.

 ಈ ಪ್ರಕರಣದಲ್ಲಿ ಆರೋಪಿ ಹಾಗೂ ಸ್ವತ್ತು ಪತ್ತೆ ಬಗ್ಗೆ ಕಾರ್ಕಳ ವೃತ್ತ ನಿರೀಕ್ಷಕರಾದ ಜಾಯ್ ಅಂತೋನಿ, ಕಾರ್ಕಳ ನಗರ ಠಾಣೆ ಪಿಎಸ್ಐ ನಂಜಾ ನಾಯ್ಕ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ   ರಾಜೇಶ್ ಕುಂಪಲ,  ಪ್ರಶಾಂತ್ ಮಣಿಯಾಣಿ, ಮೂರ್ತಿ.ಕೆ, ಗಿರೀಶ್‌ ಉಳಿಯ, ರಾಘವೇಂದ್ರ, ಘನ ಶ್ಯಾಮ, ಭೀಮಪ್ಪ, ಚಾಲಕರುಗಳಾದ ಜಗದೀಶ, ಸತೀಶ ಮತ್ತು  ಕಾಪು ವೃತ್ತ ನಿರೀಕ್ಷಕರಾದ ಶ್ರೀ ಹಾಲಮೂರ್ತಿ ರಾವ್ ಹಾಗೂ  ಅವರ ಸಿಬ್ಬಂದಿಗಳಾದ ಪ್ರವೀಣ್ ಮತ್ತು ರಾಜೇಶ್ ಹೆರ್ಗ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಸಿ.ಡಿ.ಆರ್ ಘಟಕದ ಸಿಬ್ಬಂದಿಗಳಾದ ದಿನೇಶ್ ಮತ್ತು ಶಿವಾನಂದ  ಇವರುಗಳು ಸಹಕರಿಸಿರುತ್ತಾರೆ.


Spread the love

Exit mobile version