ಕಾರ್ಕಳ: ಸಮಾಜದಲ್ಲಿ ಬಡವರಾಗಿ ಶಿಕ್ಷಣ ಹಾಗೂ ಇತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾದವರಿಗೆ ಕರುಣೆ ತೋರಿಸಿ ಅವರ ಬದುಕಿಗೆ ದಾರಿ ತೋರುವಂತೆ ಮಾಡಿದ ಕೆಲಸಕ್ಕೆ ದೇವರು ತಕ್ಕ ಪ್ರತಿಫಲ ನೀಡಲು ಮರೆಯುವುದಿಲ್ಲ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಬುಧವಾರ ಮಿಯಾರು ಸಂತ ದೊಮಿನಿಕರ ದೇವಾಲಯದ ಅಮೃತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ದೇವಾಲಯದ ಅಮೃತ ಮಹೋತ್ಸವ ಆಚರಣೆ ನಮಗೆ ಹಿಂದಿನ ಘಟನೆಗಳನ್ನು ಹಾಗೂ ನೆನಪುಗಳನ್ನು ಮೆಲುಕು ಹಾಕಲು ಮತ್ತೊಮ್ಮೆ ಅವಕಾಶ ನೀಡುವುದರೊಂದಿಗೆ ಮುಂದೆ ದೇವಾಲಯದ ಮುಕಾಂತರ ಸಮಾಜಕ್ಕೆ ಯಾವ ಕೊಡುಗೆ ನೀಡಬಹುದು ಎಂಬುದನ್ನು ಆಲೋಚಿಸಲು ಅವಕಾಶ ಮಾಡಿಕೊಡುತ್ತದೆ. ನಮ್ಮ ಆಚರಣೆ ಕೇವಲ ಹೊರಗಿನ ಸಂಭ್ರಮ ಮಾತ್ರ ಆಗಿರದೆ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಸಮಸ್ಯೆಗಳಿಗೆ ಸಿಲುಕಿ ಒದ್ದಾಡುತ್ತಿರುವವರು ಮುಖದಲ್ಲಿ ನಗು ಮೂಡಿಸುವ ಕೆಲಸಗಳಾದ ಮಾತ್ರ ನಾವು ಮಾಡುವ ಸಂಭ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ದೇಶದ ಪ್ರಗತಿಯಲ್ಲಿ ಕ್ರಿಶ್ಚಿಯನ್ ಸಮುದಾಯ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನೀಡಿ ಸೇವೆ ಶ್ಲಾಘನೀಯ. ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಲು ಇಲ್ಲಿನ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ನೀಡಿದ ಮೌಲ್ಯಯುತ ಶಿಕ್ಷಣವೇ ಕಾರಣವಾಗಿದೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಜೆಟಿನಲ್ಲಿ 100 ಕೋಟಿ ಹಣವನ್ನು ಮೀಸಲಿರಿಸಿದ್ದು ಅದನ್ನು ಹೆಚ್ಚಿಸುವ ಚಿಂತನೆ ನಡೆದಿದೆ. ಕಾರ್ಕಳ ಕ್ಷೇತ್ರ ಪ್ರವಾಸೋದ್ಯಮ ನಿಟ್ಟಿನಲ್ಲಿ ಹೆಸರುವಾಸಿಯಾಗಿದ್ದು ಅತ್ತೂರು ಸಂತಲಾರೆನ್ಸ್ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸರಕಾರ ಹಲವಾರು ಯೋಜನೆಗಳನ್ನು ಹಾಕಿ ಪೂರ್ಣಗೊಳಿಸಿದೆ. ಅತ್ತೂರು ಚರ್ಚಿಗೆ ಹೋಗುವ ರಸ್ತೆಯನ್ನು ಸುಮಾರು 4 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಿದ್ದು, ಆಸ್ಕರ್ ಫೆರ್ನಾಂಡಿಸ್ ಅವರ ಅನುದಾನದಲ್ಲಿ ಕ್ಷೇತ್ರದಲ್ಲಿ ಯಾತ್ರಾರ್ಥಿಗಳಿಗೆ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಚರ್ಚಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿರ್ಮಿಸಲಾದ ವಿದ್ಯಾರ್ಥಿ ಶಿಕ್ಷಣ ನಿಧಿಯ 6 ಲಕ್ಷ ರೂಗಳ ಚೆಕ್ಕನ್ನು ಧರ್ಮಗುರು ವಂ ಜೆರೋಮ್ ಮೊಂತೆರೊ ಅವರಿಗೆ ದಾನಿ ಫೆಡ್ರಿಕ್ ರೊಡ್ರಿಗಸ್ ಹಸ್ತಾಂತರಿಸಿದರು. ಅಮೃತ ಮಹೋತ್ಸವದ ಅಂಗವಾಗಿ ಬಡ ಕುಟುಂಬಕ್ಕೆ ಚರ್ಚಿನ ವತಿಯಿಂದ ನಿರ್ಮಿಸಿಲಾದ ಮನೆಯ ಕೀಯನ್ನು ಸಚಿವ ವಿನಯ್ ಕುಮಾರ್ ಸೊರಕೆ ಬಡ ಕುಟುಂಬಕ್ಕೆ ಹಸ್ತಾಂತರಿಸಿದರು.
ಚರ್ಚಿನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳಿಗೆ, ದಾನಿಗಳಿಗೆ, ಚರ್ಚಿನಲ್ಲಿ ಧರ್ಮಗುರುಗಳಾಗಿ ಬೇರೆ ಧರ್ಮಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸಿದವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಮೃತ ಮಹೋತ್ಸವದ ವಿಶೇಷ ಸಂಚಿಕೆ ‘ಮಾಯಾಮೋಗ್’ ಧರ್ಮಾಧ್ಯಕ್ಷರು ಬಿಡುಗಡೆ ಮಾಡಿದರು.
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ ಜೋಸ್ವಿ ಫೆರ್ನಾಂಡಿಸ್, ಅತ್ತೂರು ಸಂತ ಲಾರೆನ್ಸ್ ಕ್ಷೇತ್ರದ ವಂ ಜೋರ್ಜ್ ಡಿ’ಸೋಜಾ, ಮಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಿರ್ಮಲ, ಕೇರಾ ಸಂತ ತೆರೆಸಾ ಚರ್ಚಿನ ಧರ್ಮಗುರು ವಂ ಪಾಸ್ಕಲ್ ಮಿನೇಜಸ್, ದಾನಿ ಫ್ರೆಡ್ರಿಕ್ ರೊಡ್ರಿಗಸ್ ಉಪಸ್ಥಿತರಿದ್ದರು.
ಚರ್ಚಿನ ಧರ್ಮಗುರು ವಂ ಜೆರೊಮ್ ಮೋಂತೆರೊ ಸ್ವಾಗತಿಸಿ, ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಸಿಲ್ವಾ ವಂದಿಸಿದರು. ಕಾರ್ಯದರ್ಶಿ ರಾಯನ್ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿದರು.