ಕಾರ್ಕಳ: ಯುವತಿಯರನ್ನು ಬೆದರಿಸಿ ಹಣ ಪಡೆಯುತ್ತಿದ್ದ ಆರೋಪಿ ಸೆರೆ

Spread the love

ಕಾರ್ಕಳ: ಯುವತಿಯರನ್ನು ಬೆದರಿಸಿ ಹಣ ಪಡೆಯುತ್ತಿದ್ದ ಆರೋಪಿ ಸೆರೆ

ಮಂಗಳೂರು: ಸಾಮಾಜಿಕ ಜಾಲತಾಣ ಮೂಲಕ ಯುವತಿಯರ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ಅಶ್ಲೀಲ ವಿಡಿಯೋ ಇರುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದ ಆರೋಪದ ಮೇರೆಗೆ ಕಾರ್ಕಳ ಈದು ಗ್ರಾಮದ ಸತೀಶ್ ಹೊಸ್ಮಾರು (36) ಎಂಬಾತನನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಯುವತಿಯರ ಮೊಬೈಲ್ ನಂಬರನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಐಡಿ ಮೂಲಕ ಪಡೆದು ಅವರಿಗೆ ನಿಮ್ಮ ಅಶ್ಲೀಲ ವಿಡಿಯೋ ನನ್ನಲ್ಲಿ ಇರುವುದಾಗಿ ಬೆದರಿಕೆ ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ಆರೋಪಿಸಿ ಮಹಿಳೆಯೊಬ್ಬರು ಕದ್ರಿ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಸತೀಶ್‌ನನ್ನು ಬಂಧಿಸಿ ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ.

ಮೊಬೈಲ್‌ನಲ್ಲಿ ಕೃತ್ಯಕ್ಕೆ ಸಂಬಂಧಿಸಿ ದಾಖಲೆಗಳು ಲಭಿಸಿದೆ ಎನ್ನಲಾಗಿದೆ. ಆರೋಪಿ ಮೇಲೆ ಈಗಾಗಲೇ ಕಾರ್ಕಳ ಗ್ರಾಮಾಂತರ ಮತ್ತು ನಗರ ಠಾಣೆಯಲ್ಲಿ ಕಳವು, ಮಹಿಳೆಯ ಮಾನಭಂಗ, ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಒಂದು ವರ್ಷದ ಹಿಂದೆ ಕಾರ್ಕಳ ನಗರ ಠಾಣೆಯಲ್ಲಿ ಕಳವು ಕೇಸಿನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಕದ್ರಿ ಪೊಲೀಸ್ ಠಾಣಾ ನಿರೀಕ್ಷಕ ಸೋಮಶೇಖರ್ ಜೆ.ಸಿ., ಎಸ್ಸೈ ಮನೋಹರ್ ಪ್ರಸಾದ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ವರ್ಗವು ಪಾಲ್ಗೊಂಡಿತ್ತು.


Spread the love
Subscribe
Notify of

0 Comments
Inline Feedbacks
View all comments