ಕಾರ್ತಿಕ್ ರಾಜ್ ಕೊಲೆ ಪ್ರಕರಣ: ಸಹೋದರಿ ಸಹಿತ ಮೂವರ ಬಂಧನ
ಮಂಗಳೂರು: ಪಜೀರು ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಕಾರ್ತಿಕ್ ರಾಜ್ ಸಹೋದರಿ ಸಹಿತ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾರ್ತಿಕ್ ರಾಜ್ ಸಹೋದರಿ ಕಾವ್ಯಶ್ರೀ, ಪಂಡಿತ್ ಹೌಸ್ ಸಂತೋಷ್ ನಗರ ನಿವಾಸಿ ಗೌತಮ್, ಮತ್ತು ಆತನ ಸಹೋದರ ಗೌರವ್ ಎಂದು ಗುರುತಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಕಮೀಷನರ್ ಚಂದ್ರಶೇಖರ ಅವರು ಅಕ್ಟೋಬರ್ 22 ರಂದು ಕಾರ್ತಿಕ್ ಅವರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಣಾಜೆ ಗಣೇಶ್ ಮಹಲ್ ಎಂಬಲ್ಲಿ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸುದರ್ಶನ ನಗರ ವಾಸಿ ಉಮೇಶ್ ಪಿ ಎಂಬವರ ಮಗನಾದ ಕಾರ್ತಿಕ ರಾಜ್ ಎಂಬಾತನನ್ನು ಬೆಳಿಗ್ಗೆ ಸುಮಾರು 05:30 ಗಂಟೆ ವೇಳೆಗೆ ಜಾಗಿಂಗ್ ಹೋಗುತ್ತಿರುವ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ತಲೆಗೆ ಯಾವುದೋ ಆಯುಧದಿಂದ ಬಲವಾಗಿ ಹೊಡೆದು ಗಂಭೀರ ಗಾಯಗೊಳಿಸಿದಾತನನ್ನು ಕೊಣಾಜೆ ಪೊಲೀಸರ ಸಹಾಯದಿಂದ ಸಾರ್ವಜನಿಕರು ಸೇರಿಕೊಂಡು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆಕಾರ್ತಿಕ ರಾಜ್ ನ ತಂದೆ ಉಮೇಶ್ ರವರು ನೀಡಿದ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಾಗಿರುತ್ತದೆ. ಪ್ರಕರಣದಲ್ಲಿ ಗಂಭೀರ ಗಾಯಗೊಂಡ ಕಾರ್ತಿಕ ರಾಜ್ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 23-10-2016 ರಂದು ಮೃತಪಟ್ಟಿದ್ದು, ಕೊಲೆ ಪ್ರಕರಣವಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗದೇ ಇದ್ದುದರಿಂದ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸ್ ಆಯುಕ್ತರು ತಂಡವೊಂದನ್ನು ರಚಿಸಿ ಪ್ರಕರಣದ ತನಿಖೆಯನ್ನು ಸಿ.ಸಿ.ಆರ್.ಬಿ ಘಟಕದ ಎ.ಸಿ.ಪಿರವರಾದ ವೆಲೆಂಟೈನ್ ಡಿ’ಸೋಜಾರವರಿಗೆ ಆದೇಶಿಸಿದ್ದು, ಪ್ರಕರಣದ ತನಿಖೆ ಮುಂದುವರಿಸಿದ ವೆಲೆಂಟೈನ್ ಡಿ’ಸೋಜಾ ಮತ್ತು ಸಿಬ್ಬಂದಿಯವರ ತಂಡ ಪ್ರಕರಣದ ತನಿಖೆಯನ್ನು ಮುಂದುವರೆಸಿ, ಕೊಲೆ ನಡೆದ ಎಲ್ಲಾ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿಯನ್ನು ಕಲೆ ಹಾಕಿದಾಗ ಮೃತ ಕಾರ್ತಿಕ ರಾಜ್ ನ ತಂಗಿ ಶ್ರೀಮತಿ ಕಾವ್ಯಶ್ರೀ ಕಣಚೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಕುತ್ತಾರ್ನನ ಸಂತೋಷ್ ನಗರ ವಾಸಿ ಗೌತಮ್ ಎಂಬವವನು ಪರಿಚಯವಾಗಿದ್ದನು. ಎಂಬ ಮಾಹಿತಿ ಮೇರೆಗೆ ಹಾಗೂ ತನಿಖೆಯಿಂದ ಗೌತಮ್ ಮತ್ತು ಆತನ ತಮ್ಮ ಗೌರವ್ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತಗೊಂಡ ಮೇರೆಗೆ ವೆಲೆಂಟೈನ್ ಡಿ’ಸೋಜಾ ಮತ್ತು ಸಿಬ್ಬಂದಿಯವರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ, ಕಾವ್ಯಶ್ರೀಯು ಗೌತಮ್ ಇವನ ಬಳಿ ಈತನಲ್ಲಿ ಪದೇ ಪದೇ ತನ್ನ ಅಣ್ಣನಾದ ಕಾರ್ತಿಕ ರಾಜ್ ನ ಕೊಲೆ ಮಾಡಬೇಕೆಂದು ಒತ್ತಾಯಿಸಿ, 5 ಲಕ್ಷ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿದ್ದು, ಗೌತಮ್ನು ಕೊಂಡಾಣ ಗ್ರಾಮದಲ್ಲಿ ಮನೆಯನ್ನು ಕಟ್ಟುತ್ತಿದ್ದು, ಮನೆ ಕಟ್ಟಲು ಹಣದ ಅಡಚಣೆಯಾಗಿದ್ದು ಸುಲಭ ದಾರಿಯಲ್ಲಿ ಹಣ ಸಿಗುತ್ತದೆ ಎಂದು ಯೋಚಿಸಿ ತಮ್ಮ ಗೌರವ್ನೊಂದಿಗೆ ಸೇರಿಕೊಂಡು, ದಿನಾಂಕ 22-10-2016 ರಂದು ಬೆಳಿಗ್ಗೆ ಕಾರ್ತಿಕ ರಾಜ್ ನು ಜಾಗಿಂಗ್ ಹೋಗುವಾಗ, ಇಬ್ಬರೂ ಸೇರಿಕೊಂಡು ತಲೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಿರುವುದಾಗಿದೆ. ಪ್ರಕರಣದಲ್ಲಿ ತನಿಖೆಯನ್ನು ಮುಂದುವರಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಆರೋಪಿ ಪತ್ತೆ ಕಾರ್ಯದಲ್ಲಿ ಸಿ.ಸಿ.ಆರ್.ಬಿ ಎ.ಸಿ.ಪಿ ವೆಲೆಂಟೈನ್ ಡಿ’ಸೋಜಾ, ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ಶೃತಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್, ಸಿಬ್ಬಂದಿಗಳಾದ ಸುನಿಲ್ ಕುಮಾರ್[ಸಂಚಾರ ದಕ್ಷಿಣ ಠಾಣೆ], ದಾಮೋದರ [ಗ್ರಾಮಾಂತರ ಠಾಣೆ], ರಿಜಿ ವಿ.ಎಂ. [ಕೋಣಾಜೆ ಠಾಣೆ], ಸುಧೀರ್ ಶೆಟ್ಟಿ [ಬಜಪೆ ಠಾಣೆ,] ಮನೋಜ್ ಕುಮಾರ್ ಮತ್ತು ಮಹಮ್ಮದ್ ಇಕ್ಬಾಲ್ [ಸಂಚಾರ ಉತ್ತರ ಠಾಣೆ.] ರವರು ಭಾಗವಹಿಸಿರುತ್ತಾರೆ.