ಕಾರ್ಪೋರೇಶನ್, ಸಿಂಡಿಕೇಟ್ ಬ್ಯಾಂಕ್ ವಿಲೀನ ಹಿಂಪಡೆಯಲು ಆಗ್ರಹ – ಹೋರಾಟದ ಎಚ್ಚರಿಕೆ

Spread the love

ಕಾರ್ಪೋರೇಶನ್, ಸಿಂಡಿಕೇಟ್ ಬ್ಯಾಂಕ್ ವಿಲೀನ ಹಿಂಪಡೆಯಲು ಆಗ್ರಹ – ಹೋರಾಟದ ಎಚ್ಚರಿಕೆ

ಮಂಗಳೂರು : ಕೇಂದ್ರ ಸರಕಾರವು ಕಾರ್ಪೋರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕ್‌ನ್ನು ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಲು ಮಾಡಿರುವ ಆದೇಶವನ್ನು ತತ್‌ಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಕರಾವಳಿ ಜನರಿಂದ ಸಂಘಟಿತ ಹೋರಾಟ ನಡೆಯಲಿದೆ ಎಂದು ನ್ಯಾಯವಾದಿ ದಿನೇಶ್ ಹೆಗಡೆ ಉಳಿಪಾಡಿ ಎಚ್ಚರಿಸಿದ್ದಾರೆ.

ಈ ಕುರಿತು    ಸೋಮವಾರ ಮಾತನಾಡಿದ ಅವರು, ಕಾರ್ಪೋರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕ್ ಕರಾವಳಿಯ ಜನತೆಗೆ ಹಿರಿಯರು ನೀಡಿರುವ ಆಸ್ತಿಯಾಗಿದೆ. ಅದನ್ನು ಉಳಿಸಿಕೊಳ್ಳುವುದು ಕರಾವಳಿಗರ ಕರ್ತವ್ಯ. ಜಿಲ್ಲೆಯ ಹೆಮ್ಮೆಯ ಬ್ಯಾಂಕ್‌ಗಳನ್ನು ವಿಲೀನದ ಹೆಸರಿನಲ್ಲಿ ಅಳಿಸಿ ಹಾಕುವ ಕೇಂದ್ರ ಸರಕಾರದ ನಿರ್ಧಾರವನ್ನು ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೂ ವಿಲರಾಗಿದ್ದಾರೆ. ಸಂಸದರಾದ ನಳಿನ್‌ಕುಮಾರ್ ಕಟೀಲು ಹಾಗೂ ಶೋಭಾ ಕರಂದ್ಲಾಜೆ ಅವರು ಬ್ಯಾಂಕ್ ವಿಲೀನ ಸಂಬಂಧಿಸಿ ತಮ್ಮ ನಿಲುವುಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಕಳೆದ 2019ನೇ ಆಗಸ್ಟ್ ತಿಂಗಳ 30 ರಂದು ಕೇಂದ್ರ ಸರಕಾರವು ಹಲವು ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನ ಮಾಡುವರೇ ನಿರ್ಧಾರ ಕೈಗೊಂಡಿರುತ್ತದೆ. ಕೇಂದ್ರ ಸರಕಾರವು ವಿಲೀನಗೊಳಿಸಲು ಉದ್ದೇಶಿಸಿರುವ ಬ್ಯಾಂಕುಗಳಲ್ಲಿ ಎರಡು ಬ್ಯಾಂಕುಗಳು ನಮ್ಮ ಕರಾವಳಿಯಲ್ಲಿ ಸ್ಥಾಪನೆಗೊಂಡಂತಹ ಕಾರ್ಪೋರೇಶನ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಆಗಿರುತ್ತದೆ. ಕರಾವಳಿ ಜಿಲ್ಲೆಯಲ್ಲಿ ಸ್ಥಾಪನೆಗೊಂಡು ಮಂಗಳೂರಿನಲ್ಲೇ ಕೇಂದ್ರ ಕಛೇರಿಯನ್ನು ಹೊಂದಿರುವ ಕಾರ್ಪೋರೇಶನ್ ಬ್ಯಾಂಕನ್ನು ಮುಂಬಯಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ಯೂನಿಯನ್ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುವುದಾಗಿಯೂ, ಅದೇ ರೀತಿ ಕರಾವಳಿಯ ಸಿಂಡಿಕೇಟ್ ಬ್ಯಾಂಕ್‍ನ್ನು ಪ್ರಸ್ತುತ ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಕೆನರಾ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ನಿರ್ಧಾರವನ್ನು ಸರಕಾರವು ಪ್ರಕಟಿಸಿದೆ.

1906 ನೇ ಇಸವಿಯಲ್ಲಿ ಸ್ಥಾಪನೆಗೊಂಡ ಕಾರ್ಪೋರೇಶನ್ ಬ್ಯಾಂಕ್ ಶತಮಾವನ್ನು ಪೂರೈಸಿದರೆ. 1925ನೇ ಇಸವಿಯಲ್ಲಿ ಸ್ಥಾಪನೆಗೊಂಡ ಸಿಂಡಿಕೇಟ್ ಬ್ಯಾಂಕ್ ಶತಮಾನವದ ಹಿರಿಮೆಯನ್ನು ಗಳಿಸಲು ಇನ್ನು 5 ವರ್ಷವಷ್ಟೇ ಬಾಕಿ ಇದೆ. ಈ ಸುದೀರ್ಘ ಇತಿಹಾಸವಿರುವ ಕರಾವಳಿಯ ಸಂಸ್ಕ್ರತಿಯನ್ನು ಪ್ರತಿನಿಧಿಸುವ 2 ಬ್ಯಾಂಕುಗಳನ್ನು ಇತರ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮೂಲಕ ಅದರ ಅಸ್ಥಿತ್ವವನ್ನೇ ಅಳಿಸಿ ಹಾಕುವುದಲ್ಲದೆ ಕರಾವಳಿಯ ಗ್ರಾಮೀಣ ಭಾಗದ ಹಣಕಾಸು ಸೇವೆಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ.

ನಾಲ್ಕು ರಾಷ್ಟ್ರೀಕೃತ ಬ್ಯಾಂಕ್ ಒಂದು ಖಾಸಗಿ ಬ್ಯಾಂಕನ್ನು ಸ್ಥಾಪಿಸಿ ದೇಶದ ಆರ್ಥಿಕವ್ಯವಹಾರದಲ್ಲಿ ಕರಾವಳಿಯನ್ಲು ಗುರುತಿಸುವಂತೆ ಮಾಡಲು ಆ ಬ್ಯಾಂಕುಗಳನ್ನು ಸ್ಥಾಪಿಸಿರುವ ನಮ್ಮ ಹಿರಿಯರು ಕಾರಣಕರ್ತರಾಗಿತುತ್ತಾರೆ. ವಿಜಯಾ ಬ್ಯಾಂಕನ್ನು ಎ.ಬಿ. ಶೆಟ್ಟಿ ಕಾರ್ಪೋರೇಶನ್ ಬ್ಯಾಂಕ್‍ನ ಖಾನ್ ಬಹದ್ದೂರ್ ಹಾಜಿ ಅಬ್ದುಲ್ ಹಾಜಿ ಖಾಸಿಂ ರವರು, ಸಿಂಡಿಕೇಟ್ ಬ್ಯಾಂಕನ್ನು ಟಿ ಎಂ. ಎ ಪೈ, ಉಪೇಂದ್ರ ಪೈ ಮತ್ತು ವಾಮನ್ ಕುಡುವ ಕೆನರಾ ಬ್ಯಾಂಕನ್ನು ಅಮ್ಮೆಂಬಳ ಸುಬ್ಬರಾಯ ಪೈ ಯವರು, ಕರ್ನಾಟಕ ಬ್ಯಾಂಕನ್ನು ಬಿ ಆರ್. ವ್ಯಾಸರಾಯ್ ಆಚಾರ್ ಮತ್ತು ಕೆ ಎಸ್ ಎನ್ ಅಡಿಗರವರ ಮುಂದಾಳುತ್ವದಲ್ಲಿ ಸ್ಥಾಪಿಸಿ ಈ ಕರಾವಳಿ ಜಿಲ್ಲೆಯ ಜನರನ್ನು ವಿದ್ಯಾವಂತರನ್ನಾಗಿ ಮತ್ತು ಅಭಿವೃದ್ಧಿ ಪಥದತ್ತ ಸಾಗಿಸುದಲ್ಲಿ ಕಾರಣೀಕರ್ತರಾಗಿರುತ್ತಾರೆ.

ಕಳೆದ ಜನವರಿ 1 2019 ರಂದು ನಮ್ಮ ಜಿಲ್ಲೆಯ ಹೆಮ್ಮೆಯ ಬ್ಯಾಂಕಾದ ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡದೊಂದಿಗೆ ಅವೈಜ್ಞಾನಿಕವಾಗಿ ವಿಲೀನಗೊಳಿಸುವ ಮೂಲಕ ಕೇಂದ್ರ ಸರಕಾರವು ಈ ಜಿಲ್ಲೆಯ ಜನತೆಗೆ ಆಘಾತವನ್ನುಂಟು ಮಾಡಿರುತ್ತದೆ. ಆಘಾತದಿಂದ ಎಚ್ಚೆತ್ತೂಕೊಳ್ಳುವ ಮೊದಲೇ ಜಿಲ್ಲೆಯ ಇತರ ಎರಡು ಬ್ಯಾಂಕ್‍ಗಳಾದ ಕಾರ್ಪೋರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕನ್ನು ಇತರ ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸಿ ಅದರ ಅಸ್ತಿತ್ವವನ್ನೇ ಅಳಿಸಿ ಹಾಕುವ ಮೂಲಕ ಕರಾವಳಿಯ ಅಸ್ಮಿತೆಯನ್ನೇ ಅಳಿಸಿಹಾಕಿದಂತಾಗಿದೆ.

ನಮ್ಮ ಹಿರಿಯರು ಈ ಜಿಲ್ಲೆಯ ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ 5 ಬ್ಯಾಂಕುಗಳಿನ್ನು ಸ್ಥಾಪಿಸಿ ಆ ಮೂಲಕ ಈ ಜಿಲ್ಲೆಯ ಅಭಿವೃದ್ಧಿಗೆ ಕಾರಣೀಕರ್ತರಾಗಿರುತ್ತಾರೆ ಆದರೆ ಹಿರಿಯರು ಸ್ಥಾಪಿಸಿರುವ ಸಂಸ್ಥೆಗಳನ್ನು ಇನ್ನಷ್ಟು ಬೆಳೆಸುವ ಜವಾಬ್ದಾರಿಯನ್ನು ಹೊತ್ತಿರುವ ನಾವು ಈ ಜಿಲ್ಲೆಗೆ ಹೊಸ ಯೋಜನೆಗಳನ್ನೋ ಕಾರ್ಖಾನೆಗಳನ್ನೋ ಹಣಕಾಸು ಸಂಸ್ಥೆಗಳನ್ನೋ ಸ್ಥಾಪಿಸುವ ಬದಲಾಗಿ ಇತಿಹಾಸ ಗರಿಮೆಯುಳ್ಳ ನಮ್ಮ ಸಂಸ್ಥೆಗಳನನ್ನು ಒಂದೊಂದಾಗಿ ಕಳೆದು ಕೊಳ್ಳುತ್ತಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಹಣಕಾಸು ವ್ಯವಹಾರದ ಕ್ಷಮತೆ ಹೊಂದಿದಂತಹ ವಿಜಯ ಬ್ಯಾಂಕನ್ನು ಈಗಾಗಲೇ ಕಳೆದು ಕೊಂಡಿರುತ್ತೇವೆ. ಇನ್ನುಳಿದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕಾರ್ಪೋರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕನ್ನು ಕಳೆದುಕೊಳ್ಳವ ಹಂತದಲ್ಲಿ ಇದ್ದೇವೆ.

ಈ ಕರಾವಳಿ ಜಿಲ್ಲೆಯಲ್ಲಿ ಹುಟ್ಟಿದಂತಹ 5 ಬ್ಯಾಂಕುಗಳೂ ನಮ್ಮ ಕರಾವಳಿಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಬ್ಯಾಂಕುಗಳನ್ನು ಸ್ಥಾಪಿಸಿರುವ ಸ್ಥಾಪಕರ ಮೂಲ ಉದ್ಧೇಶವು ಸೇವಾ ಮನೋಭಾವವಾಗಿತ್ತೇ ಹೊರತು ಯಾವುದೇ ವ್ಯಾಪಾರ ಮನೋಭಾವವಿರಲಿಲ್ಲ.

ಬ್ಯಾಂಕುಗಳು ಜಾಗತೀಕರಣ ಮಾಡುವುದೆಂದರೆ ನಗರಗಳನ್ನು ಕೇಂದ್ರೀಕರಿಸಿ ಆ ಮೂಲಕ ರಾಷ್ಟ್ರೀಯ ಮತ್ತು ಮಟ್ಟದಲ್ಲಿ ಶ್ರೀಮಂತವರ್ಗದ ಗ್ರಾಹಕರ ಮೂಲಕ ವ್ಯವಹಾರ ಮಾಡುವುದೆಂದರ್ಥ ಇದರಿಂದ ಸಾಮಾನ್ಯ ಜನರಿಗಾಗಲೀ ಗ್ರಾಮೀಣ ಜನರಿಗಾಗಲೀ ಯಾವುದೇ ಸೇವೆ ದೊರೆಯುವುದಿಲ್ಲ ಲಾಭವೂ ಇರುವುದಿಲ್ಲ.

ಸಿಂಡಿಕೇಟ್ ಮತ್ತು ಕಾರ್ಪೋರೇಶನ್ ಬ್ಯಾಂಕುಗಳು ಗ್ರಾಮೀಣ ಮತ್ತು ಸಾಮಾನ್ಯ ವರ್ಗದ ಜನರಿಗೆ ಸೇವೆ ನೀಡುವ ಬ್ಯಾಂಕ್‍ಗಳಾಗಿರುತ್ತದೆ. ಹೀಗಾಗಿ ಬ್ಯಾಂಕುಗಳ ವಿಲೀನ ಮತ್ತು ಜಾಗತೀಕರಣ ಮಾಡುವುದರಿಂದ ಸಾಮಾನ್ಯ ವರ್ಗದ ಜನರಿಗೆ ಮತ್ತು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ವ್ಯವಹಾರದ ಮೇಲೆ ತೀವ್ರತರ ತೊಂದರೆಯುಂಟಾಗುತ್ತದೆ.

ಈ ಹಿಂದೆ ಬ್ಯಾಂಕ್ ವಿಲೀನ್ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಕ್ಕೆ ಇತರ ಬ್ಯಾಂಕ್‍ಗಳನ್ನು ವಿಲೀನಗೊಳಿಸಿದ್ದರೂ ಆದರಿಂದ ಯಾವುದೇ ಆರ್ಥಿಕ ಪುನಶ್ಚೇತನವಾಗಲೀ, ಬ್ಯಾಂಕಿಂಗ್ ಕ್ಷೇತ್ರದ ಪುನಶ್ಚೇತನವಾಗಲೀ ಆಗಿರುವುದಿಲ್ಲ ಹೊರತಾಗಿ ಎರಡೂ ಬ್ಯಾಂಕುಗಳು ವಿಲೀನ ಗೊಳಿಸುವಾಗ ಇದ್ದಂತಹ ಒಟ್ಟು ಶಾಖೆಗಳಲ್ಲಿ ಹಲವಾರು ಶಾಖೆಗಳನ್ನು ಮುಚ್ಚಿರುತ್ತದೆ. ಅದರಲ್ಲೂ ಸದ್ರಿ ಬ್ಯಾಂಕುಗಳು ಮುಚ್ಚಿರುವ ಶಾಖೆಗಳಲ್ಲಿ ಗ್ರಾಮೀಣ ಪ್ರದೇಶದ್ದೇ ಬಹುಪಾಲು ಆಗಿರುತ್ತದೆ.

ಕಾರ್ಪೋರೇಶನ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕನ್ನು ಇತರ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿದ ಬಳಿಕ ಗ್ರಾಮೀಣ ಭಾಗದಲ್ಲಿರುವ ಶಾಖೆಗಳನ್ನು ಮುಚ್ಚಲಾಗುತ್ತದೆ. ಇದರಿಂದಾಗಿ ಸಾಮಾನ್ಯ ವರ್ಗದ ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆಯುಂಟಾಗುತ್ತದೆ.

ಕಾರ್ಪೋರೇಶನ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕನ್ನು ಕರಾವಳಿಯ ಜನತೆಗೆ ನಮ್ಮ ಹಿರಿಯರು ನೀಡಿರುವ ಆಸ್ಥಿಯಾಗಿರುತ್ತದೆ. ಅದನ್ನು ಉಳಿಸಿಬೆಳೆಸುವುದು ಕರಾವಳಿಗರಾದ ನಮ್ಮ ಆಧ್ಯಕರ್ತವ್ಯವಾಗಿದೆ ಜಿಲ್ಲೆಯ ಹೆಮ್ಮೆಯ ಬ್ಯಾಂಕ್‍ಗಳನ್ನು ಕೇಂದ್ರ ಸರಕಾರವು ವಿಲೀನದ ಹೆಸರಿನಲ್ಲಿ ಅಳಿಸಿ ಹಾಕುವ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ತಡೆಯುವಲ್ಲಿ ವಿಫಲರಾಗಿರುವ ಬಗ್ಗೆ ಈ ಜಿಲ್ಲೆಯ ಜನರು ಅಸಮಧಾನ ವ್ಯಕ್ತ ಪಡಿಸುತ್ತಿದ್ದಾರೆ. ಕರಾವಳಿ ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರುಗಳಾದ ನಳಿನ್ ಕುಮಾರ್ ಕಟೀಲು ಹಾಗು ಶೋಭಾ ಕರಂದ್ಲಾಜೆ ಈ ಬ್ಯಾಂಕುಗಳನ್ನು ಉಳಿಸುವಲ್ಲಿ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುದಲ್ಲಿ ವಿಫಲರಾಗಿರುತ್ತಾರೆ. ಅವರ ಈ ವೈಫಲ್ಯತೆಯನ್ನು ಕರಾವಳಿಗರಾದ ನಾವು ಖಂಡಿಸುತ್ತೇವೆ.

ಕೇಂದ್ರ ಸರಕಾರವು ಕಾರ್ಪೋರೇಶನ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕನ್ನು ಇತರ ಬ್ಯಾಂಕುಗಳೊಂದಿಗೆ ವಿಲೀನಗೊಳಸಲು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡಯಬೇಕು ಮತ್ತು ಸದರಿ ವಿಲೀನಗಳ ಬಗ್ಗೆ ಕರಾವಳಿಯ ಸಂಸದರುಗಳಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆಯವರು ತಮ್ಮ ನಿಲುವುಗಳನ್ನು ಪ್ರಕಟಿಸಬೇಕು ಅದೇ ರೀತಿ ಈ ಜಿಲ್ಲೆಯ ಮತ್ತು ರಾಜ್ಯದ ರಾಜಕೀಯ ಪಕ್ಷಗಳು ಬ್ಯಾಂಕ್ ವಿಲೀನದ ವಿರುದ್ಧವಾಗಿ ತಮ್ಮ ನಿಲುವುಗಳನ್ನು ಕೂಡಲೇ ಪ್ರಕಟಿಸಬೇಕು ಎಂದು ನಾವುಗಳು ಆಗ್ರಹಿಸುತ್ತಿದ್ದೇವೆ.

ಸಿಂಡಿಕೇಟ್ ಮತ್ತು ಕಾರ್ಪೋರೇಶನ್ ಬ್ಯಾಂಕ್‍ನ್ನು ವಿಲೀನಗೊಳಿಸುವ ನಿರ್ಧಾರದ ವಿರುದ್ಧವಾಗಿ ಕರಾವಳಿಗರಾದ ನಾವುಗಳು ಸಂಘಟಿತರಾಗಿ ಹೋರಾಡಲು ನಿರ್ಧರಿಸಿರುತ್ತೇವೆ. ಇದರ ವಿರುದ್ಧ ಕರಾವಳಿಗರು ಸಂಘಟಿತ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಹರಿಕೃಷ್ಣ ಪುನರೂರು, ಕೊಲ್ಲಾಡಿ ಬಾಲಕೃಷ್ಣ ರೈ, ಮುನೀರ್ ಕಾಟಿಪಳ್ಳ, ಸದಾಶಿವ ಹೊಸಪೇಟೆ, ಹರೀಶ್ ಪುತ್ರನ್, ಪ್ರದೀಪಕುಮಾರ ಕಲ್ಕೂರ, ಇಕ್ಬಾಲ್ ಮುಲ್ಕಿ, ರತ್ನಾಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.


Spread the love