ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಸರ್ಕಾರ ಕೈಚೆಲ್ಲಿ ಕುಳಿತಿದೆ: ಕೆ. ಶಂಕರ್ ಆರೋಪ
ಕುಂದಾಪುರ: ರಾಜ್ಯ, ಕೇಂದ್ರ ಸರ್ಕಾರಗಳು ಕಾರ್ಮಿಕರ ಹಿತಾಸಕ್ತಿಯನ್ನು ಮರೆತು ಮಾಲೀಕ ವರ್ಗಕ್ಕೆ ನೆರವಾಗುತ್ತಿದೆ. ಈ ದೇಶದ ದುಡಿಯುವ ಜನರಿಗೆ ರಕ್ಷಣೆ, ಕಾಯ್ದೆಬದ್ದ ಸೌಲಭ್ಯಗಳನ್ನು ಕೊಡುವ ಸರ್ಕಾರಗಳು ಮಾಲೀಕ ವರ್ಗದ ಮನವಿಗಳನ್ನು ಸ್ವೀಕರಿಸಿ ಮಾಲೀಕರಿಗೆ ನೆರವಾಗುವಂತಹ ನೀತಿಗಳನ್ನು ತರುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಆರೋಪಿಸಿದರು.
ಅವರು ಶುಕ್ರವಾರ ಅಂತರಾಷ್ಟ್ರೀಯ ಮೇ ದಿನಾಚರಣೆಯ ಅಂಗವಾಗಿ ಇಲ್ಲಿನ ಹೆಂಚು ಕಾರ್ಮಿಕರ ಭವನದಲ್ಲಿ ನಿಗದಿತ ಸಂಖ್ಯೆಯೊಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಅತ್ಯಂತ ಸರಳ ರೀತಿಯಲ್ಲಿ ನಡೆದ ಮೇ ದಿನಾಚರಣೆಯಲ್ಲಿ ಸಿಐಟಿಯು ದ್ವಜಾರೋಹಣಗೈದು ಮಾತನಾಡಿದರು.
ದೇಶದಲ್ಲಿ ವಿಶೇಷ ನಿಧಿ ಸಂಗ್ರಹ ಮಾಡಿ ಕಾರ್ಮಿಕರಿಗೆ ಪಾಲು ಕೊಡಿ. ಸಣ್ಣ ಕೈಗಾರಿಕೆಗಳನ್ನು ಉಳಿಸಲು ಸಣ್ಣ ಕೈಗಾರಿಕೆಗಳಿಗೂ ಪಾಲು ಕೊಡಿ ಎಂದು ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳು ನೀಡಿದ ಸಲಹೆಗಳನ್ನು ತಿರಸ್ಕರಿಸಿ ಮತ್ತೊಮ್ಮೆ ಕಾರ್ಮಿಕ ವಿರೋಧಿ ನೀತಿಯನ್ನು ಮುಂದಿವರಿಸಿದೆ. ತುರ್ತು ಪರಿಸ್ಥಿತಿಯ ಈ ಕಾಲಘಟ್ಟದಲ್ಲಿ ದೇಶದ ದುಡಿಯುವ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳು ತುರ್ತಾಗಿ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಕೆ. ಶಂಕರ್ ಆಗ್ರಹಿಸಿದರು.
ಸಿಐಟಿಯು ಮುಖಂಡ ಹೆಚ್. ನರಸಿಂಹ ಪ್ರಸ್ತಾಪಿಸಿ ಸ್ವಾಗತಿಸಿದರು. ಮುಖಂಡ ಸುರೇಶ್ ಕಲ್ಲಾಗರ ಧನ್ಯವಾದವಿತ್ತರು. ಮುಖಂಡರಾದ ವಿ. ನರಸಿಂಹ, ಮಹಾಬಲ ವಡೇರಹೋಬಳಿ, ರಾಜು ದೇವಾಡಿಗ ಮೊದಲಾದವರು ಇದ್ದರು.