ಕಾರ್ಯಕರ್ತರ ಮೇಲಾಗುವ ಹಲ್ಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸಿನಿಂದ ಎಸ್ಪಿಗೆ ಮನವಿ
ಉಡುಪಿ: ಬಿಜೆಪಿಯ ವಿಜಯೋತ್ಸವದ ಸಂದರ್ಭಗಳಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯ ಕಾರ್ಯಕರ್ತರು ಹಲ್ಲೆಯನ್ನು ಮಾಡುತ್ತಿದ್ದು ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಕೆಲವು ಕಡೆ ಬೆದರಿಕೆಗಳನ್ನು ಒಡ್ಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಭಯಭೀತರನ್ನಾಗಿಸುತ್ತಿದ್ದಾರೆ. ಇಂತಹ ಸಮಾಜ ವಿರೋಧಿ ಕೃತ್ಯದ ವಿರುದ್ಧ ಕೂಡಲೇ ಕ್ರಮವನ್ನು ಕೈಗೊಳ್ಳಬೇಕು ಮತ್ತು ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರ್ಗಿ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕಾರ್ಯದರ್ಶಿಗಳಾದ ಹರೀಶ್ ಕಿಣಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಳ, ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಕಾಂಗ್ರೆಸ್ ಮುಖಂಡರುಗಳಾದ ಉದ್ಯಾವರ ನಾಗೇಶ್ ಕುಮಾರ್, ಶೇಖರ್ ಜಿ. ಕೋಟ್ಯಾನ್, ಸುಜಯ ಪೂಜಾರಿ, ಸಾಯಿರಾಜ್, ನ್ಯಾಯವಾದಿಗಳಾದ ಹಮ್ಝದ್ ಮೊದಲಾದವರು ಉಪಸ್ಥಿತರಿದ್ದರು.
ಮನವಿಯನ್ನು ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಕ್ರಮವನ್ನು ಕೈಗೊಂಡ ವಿವರವನ್ನು ತಿಳಿಸಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವನ್ನು ಮಾಡಿಕೊಡುವುದಿಲ್ಲ ಮತ್ತು ಇಂತಹ ಸಮಾಜ ವಿರೋಧಿ ಪ್ರಕರಣಗಳು ನಡೆದರೆ ಸೂಕ್ತ ಕ್ರಮವನ್ನು ಇಲಾಖೆ ಕೈಗೊಳ್ಳುತ್ತದೆ ಎಂದು ಭರವಸೆಯನ್ನು ನಿಯೋಗಕ್ಕೆ ಇತ್ತರು.