ಕಾವ್ಯ ನಿಘೂಡ ಸಾವು; ನಿಷ್ಪಕ್ಷಪಾತ ತನಿಖೆಗೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ಆಗ್ರಹ
ಉಡುಪಿ: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, 10 ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಘೂಡ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ ಎನ್ ಎಸ್ ಯು ಐ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
ಪೋಲಿಸ್ ದಾಖಲೆಗಳ ಪ್ರಕಾರ ಕಾವ್ಯ ಹಿಂದಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುದರ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಲಾಗಿದೆ. ಆದರೆ ಕಾವ್ಯಾಳ ಹೆತ್ತವರು, ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಳ ಸಾವಿನ ಹಿಂದೆ ಷಡ್ಯಂತ್ರ ಅಡಗಿದೆ ಎನ್ನಲಾಗುತ್ತಿದೆ. ಕಾವ್ಯ ತನ್ನ ಹಾಸ್ಟೆಲ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಹಪಾಠಿ ವಿದ್ಯಾರ್ಥಿನಿಯರು ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಾಗಿ ಹೈಸ್ಕೂಲ್ ವಿದ್ಯಾರ್ಥಿನಿಯರು ಮೃತದೇಹಗಳನ್ನು ನೋಡುವಾಗ ಹೆದರುವುದು ಸರ್ವೆ ಸಾಮಾನ್ಯ ಹಾಗಿರುವಾಗಿ ವಿದ್ಯಾರ್ಥಿನಿಯರು ಹೇಗೆ ಹಾಸ್ಟೆಲಿನ ಯಾವುದೇ ಸಿಬಂದಿಗಳಿಗೆ ತಿಳಿಸದೆ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯ?
ಕೆಲವೊಂದು ಮಾಧ್ಯಮಗಳಲ್ಲಿ ಆಕೆ ಕಡಿಮೆ ಅಂಕ ಪಡೆದದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ ಆದರೆ ಕಾವ್ಯ ಒರ್ವ ಕ್ರೀಡಾಪಟುವಾಗಿ ಧ್ಯೇರ್ಯವಂತ ಹುಡುಗಿಯಾಗಿದ್ದು, ಆಕೆ ಕೇವಲ ಕಡಿಮೆ ಅಂಕದ ವಿಷಯಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ನಂಬಲು ಅಸಾಧ್ಯವಾದ ಮಾತು. ಅಲ್ಲದೆ ಕಾವ್ಯ ತನ್ನ ಹೆತ್ತವರಲ್ಲಿ ಮಾರನೇ ದಿನ ಬೆಳಿಗ್ಗ 4.30 ಕ್ಕೆ ಕ್ರೀಡಾ ತರಬೇತಿ ಇದೆ ಎಂದು ಹೇಳಿದ್ದಾಳೆ ಎನ್ನಲಾಗುತ್ತಿದ್ದು, ಆದರೆ ಶಾಲೆಯ ಆಡಳಿತ ಮಂಡಳಿ ಅದನ್ನು ನಿರಾಕರಿಸುತ್ತಿದೆ. ಕಾವ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಆಕೆ ಟ್ರ್ಯಾಕ್ ಸೂಟಿನಲ್ಲಿ ಇದ್ದದ್ದು, ಹೆತ್ತವರಿಗೆ ಆಕೆಯ ಮೃತದೇಹವನ್ನು ನೋಡಲು ಅವಕಾಶ ನೀಡದೆ ಶವಾಗಾರಕ್ಕೆ ಕೊಂಡೊಯ್ದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಶಿಕ್ಷಣ, ಕಲೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಘಟನೆಯ ಬಳಿಕ ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಪೋಲಿಸರು ವಿಸ್ತ್ರತವಾದ ತನಿಖೆಯನ್ನು ನಡೆಸಿ ಆತ್ಮಹತ್ಯೆ ಅಥವಾ ಕೊಲೆ ಎಂಬ ಕುರಿತು ನೈಜ ಸತ್ಯವನ್ನು ಹೊರತರಬೇಕಾಗಿದೆ.
ನಮ್ಮ ಸಂಘಟನೆಯ ವತಿಯಿಂದ ಇದರ ಕುರಿತು ಸೂಕ್ತವಾದ ತನಿಖೆ ನಡೆಸುವುದರೊಂದಿಗೆ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಂದೆ ಇಂತಹ ಘಟನೆಗಳಿಗೆ ಆಸ್ಪದ ನೀಡದೆ ಇರುವಂತಾಗಬೇಕು ಮತ್ತು ಕಾವ್ಯಾಳ ಮನೆಯವರಿಗೆ ನ್ಯಾಯ ಒದಗಿಸಿ ಎಲ್ಲಾ ಸಂಶಯಗಳನ್ನು ದೂರಗೊಳಿಸುವಂತೆ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ ಆಗ್ರಹಿಸಿದ್ದಾರೆ.