ಕಾಶ್ಮೀರದಲ್ಲಿನ 370 ನೇ ವಿಧಿ ರದ್ದುಗೊಳಿಸಿ ಅಖಂಡ ಭಾರತದ ಕನಸು ನನಸಾಗಿಸಿದ ಕೇಂದ್ರ ಸರಕಾರ : ಯಶ್ ಪಾಲ್ ಸುವರ್ಣ
ಉಡುಪಿ: ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370 ನೇ ವಿಧಿಯನ್ನು ರದ್ದು ಗೊಳಿಸುವ ಮೂಲಕ ದೇಶದ ನಾಗರಿಕರ ಅಖಂಡ ಭಾರತದ ಕನಸು ಸಾಕಾರಗೊಳಿಸಲು ಐತಿಹಾಸಿಕ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರಕಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಬಹುದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದ ಈ ವಿಶೇಷ ಮಾನ್ಯತೆಯನ್ನು ರದ್ದು ಗೊಳಿಸುವ ಮೂಲಕ ದೇಶವಿರೋಧಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದ ದೇಶದ್ರೋಹಿಗಳ ಮೇಲೆ ಗೃಹ ಸಚಿವ ಅಮಿತ್ ಶಾ ಕಠಿಣ ಕ್ರಮಕೈಗೊಂಡಿದ್ದಾರೆ.
ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರಗಳು ಓಲೈಕೆಯ ರಾಜಕೀಯಕ್ಕಾಗಿ ದೇಶದ ಭದ್ರತೆಗೆ ಮಾರಕವಾಗಿದ್ದ ಈ ಕಾನೂನನ್ನು ರದ್ದುಗೊಳಿಸುವ ಬದಲು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ರೀತಿಯಲ್ಲಿ ಆಡಳಿತ ನಡೆಸುತಿತ್ತು.
ಭಾರತೀಯ ಜನತಾ ಪಕ್ಷ ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 370 ನೇ ವಿಧಿಯನ್ನು ರದ್ದುಗೊಳಿಸುವ ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲವೆಂಬ ಸಂದೇಶದ ಮೂಲಕ ನಾಗರಿಕರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರ ಕಾಶ್ಮೀರದ ರಾಜಕೀಯ ಅಸ್ಥಿರತೆಗೆ ತಿಲಾಂಜಲಿ ಇಟ್ಟು ದೇಶದಲ್ಲಿನ ಭಯೋತ್ಪಾದನೆ ನಿರ್ಮೂಲನೆ, ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ ದೇಶದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.