Home Mangalorean News Kannada News ಕಾಶ್ಮೀರದಲ್ಲಿ ಯೋಧರ ಹತ್ಯೆಗೆ ಕಣ್ಣೀರಿಟ್ಟ ಉಡುಪಿ- ಪಾಪಿ ಪಾಕ್ ವಿರುದ್ಧ ಎಲ್ಲೆಲ್ಲೂ ಆಕ್ರೋಷ

ಕಾಶ್ಮೀರದಲ್ಲಿ ಯೋಧರ ಹತ್ಯೆಗೆ ಕಣ್ಣೀರಿಟ್ಟ ಉಡುಪಿ- ಪಾಪಿ ಪಾಕ್ ವಿರುದ್ಧ ಎಲ್ಲೆಲ್ಲೂ ಆಕ್ರೋಷ

Spread the love

ಕಾಶ್ಮೀರದಲ್ಲಿ ಯೋಧರ ಹತ್ಯೆಗೆ ಕಣ್ಣೀರಿಟ್ಟ ಉಡುಪಿ- ಪಾಪಿ ಪಾಕ್ ವಿರುದ್ಧ ಎಲ್ಲೆಲ್ಲೂ ಆಕ್ರೋಷ

ಉಡುಪಿ: ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ತೀವ್ರ ಆಕ್ರೋಷ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳಿಂದ ಅಲ್ಲಲ್ಲಿ ಪ್ರತಿಭಟನೆಗಳು, ಹುತಾತ್ಮ ಯೋಧರಿಗೆ ಗೌರವ, ನುಡಿನಮನ, ಶೃದ್ಧಾಂಜಲಿಯನ್ನು ಸಲ್ಲಿಸಲಾಗಿದೆ. ಎಲ್ಲೆಡೆ ಪಾಕ್ ಉಗ್ರರ ಹೇಡಿತನಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಈ ಘಟನೆಗೆ ಕಾರಣವಾದ ಪಾಕಿಸ್ತಾನದ ವಿರುದ್ಧ ಸರ್ಕಾರ ತಕ್ಷಣ ಉಗ್ರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಉಡುಪಿಯ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳ, ಹಿಂದೂ ಯುವ ಸೇನೆ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘಗಳು ಹುತಾತ್ಮ ಸೈನಿಕರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದವು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಉಡುಪಿ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ನೇತೃತ್ವದಲ್ಲಿ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಶೃದ್ಧಾಂಜಲಿ ಸಭೆ ನಡೆಸಲಾಯಿತು.

ಉುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಲಾಯಿತು.

ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಧ್ಯಕ್ಷ ವಿಶ್ವಾಸ್ ಅಮೀನ್ ನೇತೃತ್ವದಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹುತಾತ್ಮರ ಗೌರವಾರ್ಥ ಕ್ಯಾಂಡಲ್ ಗಳನ್ನು ಹಚ್ಚಿಟ್ಟು ಶೃದ್ದಾಂಜಲಿ ಸಲ್ಲಿಸಲಾಯಿತು, ಉಗ್ರರ ಕೃತ್ಯವನ್ನು ಬಲವಾಗಿ ಖಂಡಿಸಲಾಯಿತು.

ಕಾಶ್ಮೀರದಲ್ಲಿ ಉಗ್ರದ ದಾಳಿಗೆ ಬಲಿಯಾದ ಭಾರತದ ವೀರ ಯೋಧರಿಗಾಗಿ ಗಂಗೊಳ್ಳಿಯ ಮೋಹಿದ್ದೀನ್ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಜುಮ್ಮಾ ನಮಾಜ್ ಗೆ ಮೊದಲು ಮಸೀದಿಯ ಧರ್ಮಗುರುಗಳಾದ ಮೌನಾಲ ಅಬ್ದುಲ್ ವಹಾಬ್ ಸಾಹಬ್ ನಧ್ವಿ ಅವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.

ಯೋಧನ ಹತ್ಯೆಯನ್ನು ಖಂಡಿಸಿದ ಅವರು ಮುಂದೆ ಇಂತಹ ಘಟನೆಗಳು ನಡೆಯಬಾರದು, ನಮ್ಮ ಯೋಧರನ್ನು ಮುಂದೆ ಇಂತಹ ನೀಚ ಮತ್ತು ಘೋರ ಕೃತ್ಯಗಳಿಂದ ಅಲ್ಲಾಹನು ರಕ್ಷಿಸಲಿ ಎಂದು ಪ್ರಾರ್ಥಿಸಿದರು.

ಭಾರತದ ಸೈನಿಕರದ್ದು ದೇಶದ ರಕ್ಷಣೆ ಇಲ್ಲಾ ಪ್ರಾಣಾರ್ಪಣೆ – ಎಎಸ್ಪಿ ಕುಮಾರಚಂದ್ರ
ಜಮ್ಮು ಕಾಶ್ಮೀರ ಮತ್ತು ಹಿಮಾಲಯದ ಪ್ರದೇಶಗಳಲ್ಲಿ ದೇಶವನ್ನು ಕಾಯುವ ಸೈನಿಕರು ಯಾವತ್ತೂ ಮನೆಗೆ ಮರಳಿ ಹೋಗುತ್ತೇವೆ ಎಂದು ಯೋಚಿಸುವುದೇ ಇಲ್ಲ, ಆ ಸೈನಿಕರ ಮನಸ್ಸಿನಲ್ಲಿ ದೇಶದ ರಕ್ಷಣೆ, ಅಗತ್ಯ ಬಿದ್ದರೇ ಪ್ರಾಣಾರ್ಪಣೆ ಇಷ್ಟೇ ಇರುತ್ತದೆ – ಇದು ಗುರುವಾರ ಭಾರತೀಯ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಪುಲ್ವಾಮದಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆಯ ಯೋಧ, ಉಡುಪಿಯ ಹೆಚ್ಚುವರಿ ಪೊಲೀಸ್ ನಿರೀಕ್ಷಕ ಕುಮಾರಚಂದ್ರ ಅವರ ಹೃದಯಂತರಾಳದ ಮಾತು.

ಅವರು ಶುಕ್ರವಾರ ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಕನ್ನಡಪ್ರಭ – ಸುವರ್ಣ ನ್ಯೂಸ್ ಆಯೋಜಿಸಿದ್ದ ಹುತಾತ್ಮರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಸೈನಿಕರಾದ ತಾವು ಕೂಡ ಯಾವತ್ತೂ ದೇಶವನ್ನು ರಕ್ಷಿಸುವ ಕರ್ತವ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆಯೇ ಹೊರತು, ತಮ್ಮನ್ನು ರಕ್ಷಿಸಿಕೊಳ್ಳುವ ಬಗ್ಗೆ ಅಲ್ಲ. ಆದರೇ ತಮ್ಮ ಮನೆಯಲ್ಲಿ ಎಂತಹ ಆತಂಕದ ವಾತಾವರಣ ಸದಾ ಕವಿದಿರುತ್ತದೆ ಎಂಬುದನ್ನು ತಾನು ಸ್ವಯಂ ಅನುಭವಿಸಿದ್ದೇನೆ ಎಂದರು.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ, ಸೈನ್ಯದಲ್ಲಿ 18 ವರ್ಷ ಕಳೆದ ಎಎಸ್ಪಿ ಕುಮಾರಚಂದ್ರ ಅವರು ತಮ್ಮ ಮಾತಿನ ನಡುವೆ ಕೆಲವು ಕ್ಷಣ ಭಾವಾವೇಶಕ್ಕೊಳಗಾದರು. ಸೈನಿಕರ ಬಗ್ಗೆ ಸಮಾಜದಲ್ಲಿ ಇರುವ ಗೌರವದ ಬಗ್ಗೆ ಮಾತನಾಡಿದ ಅವರು ಸೈನಿಕರಿಗೆ ಇದೇ ದೊಡ್ಡ ಸ್ಪೂರ್ತಿ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ಗಣೇಶ್ ನಾಯ್ಕ್, ಪರಮಶಿವ ಅವರು ಭಾಗವಹಿಸಿ ಹುತಾತ್ಮರಾದ ತಮ್ಮ ಸಹಸೈನಿಕರಿಗೆ ಕಂಬನಿ ಮಿಡಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯ ಗೀತಾಂಜಲಿ ಸುವರ್ಣ, ಅಲೆವೂರು ಪಂಚಾಯತ್ ಅಧ್ಯಕ್ಷ ಶ್ರೀಕಾಂತ ನಾಯಕ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಜ್ಯೋತಿ ಹೆಬ್ಬಾರ್, ಬಾಲಕೃಷ್ಣ ಶೆಟ್ಟಿ ಮುಂತಾದ ಜನಪ್ರತಿನಿಧಿಗಳು ಹುತಾತ್ಮರ ಸ್ಮಾರಕದ ಮುಂದೆ ಮೊಂಬತ್ತಿ ಹಚ್ಚಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.

ಜೆಡಿಎಸ್ ನಾಯಕರಾದ ಯೋಗೀಶ್ ವಿ.ಶೆಟ್ಟಿ, ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಕಾಂಗ್ರೆಸ್ ನಾಯಕರಾದ ಅಮೃತ್ ಶೆಣೈ, ಹರೀಶ್ ಕಿಣಿ, ಜನಾರ್ದನ ಭಂಡಾರ್ಕರ್, ಬಿಜೆಪಿ ನಾಯಕರಾದ ಮಟ್ಟಾರು ರತ್ನಾಕರ ಶೆಟ್ಟಿ, ನಯನಾ ಗಣೇಶ್ ಆಗಮಿಸಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.

ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ವಿಹಿಂಪ ಪರಿಷತ್ ನಾಯಕ ವಿಲಾಸ್ ನಾಯಕ್, ಸಾವಯವವಾದಿ ಮಹೇಶ್ ಶೆಣೈ, ಪರಿಸರವಾದ ಪ್ರೇಮಾನಂದ ಕಲ್ಮಾಡಿ, ನಿವೃತ್ತ ಸರ್ಕಾರಿ ಉದ್ಯೋಗಿಗಳ ಸಂಘದ ಶ್ರೀನಿವಾಸ ಶೆಟ್ಟಿ ತೋನ್ಸೆ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ, ಪ್ರ.ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಜೊತೆಕಾರ್ಯದರ್ಶಿ ಮೈಕೆಲ್ ರೊಡ್ರಿಗಸ್ ಮತ್ತಿತರರು ಹುತಾತ್ಮರ ಯೋಧರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದರು.

ಉಡುಪಿ ಕ್ರೀಡಾ ಹಾಸ್ಟೇಲಿನ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಸುಮಾರು 200ಕ್ಕೂ ಅಧಿಕ ಕಾರ್ಯಕ್ರಮ ಮುಗಿದ ಮೇಲೂ ಸ್ವಯಂಪ್ರೇರಣೆಯಿಂದ ಬಂದು ಹುತಾತ್ಮ ಸ್ಮಾರಕದ ಮುಂದೆ ಮೊಂಬತ್ತಿಗಳನ್ನು ಹಚ್ಚಿ ಕೈಮುಗಿದು ಗೌರವ ಸಲ್ಲಿಸುತ್ತಿದ್ದುದು ಭಾವನಾತ್ಮಕವಾಗಿತ್ತು.

ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ಜಿ. ವಾಸುದೇವ ಭಟ್ ಅವರು ಸರ್ವರ ಪರವಾಗಿ ಹುತಾತ್ಮ ಯೋಧರು ಮತ್ತೊಮ್ಮೆ ಈ ಭೂಮಿಯಲ್ಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮರ ಗೌರವಾರ್ಥಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


Spread the love

Exit mobile version