Home Mangalorean News Kannada News ಕಾಶ್ಮೀರ ಆಯ್ತು; ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ -ನಳಿನ್‌ ಕುಮಾರ್‌ ಕಟೀಲ್‌ 

ಕಾಶ್ಮೀರ ಆಯ್ತು; ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ -ನಳಿನ್‌ ಕುಮಾರ್‌ ಕಟೀಲ್‌ 

Spread the love

ಕಾಶ್ಮೀರ ಆಯ್ತು; ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ -ನಳಿನ್‌ ಕುಮಾರ್‌ ಕಟೀಲ್‌ 

ಮೈಸೂರು: ‘ಸಂವಿಧಾನದ 370ನೇ ವಿಧಿ ರದ್ದತಿ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದ್ದೇವೆ. ಇನ್ನು ನಮ್ಮ ಮುಂದಿನ ಗುರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ’ ಎಂದು ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ವಿಶೇಷ ಸ್ಥಾನಮಾನ ರದ್ದುಪಡಿಸುವ ಮೂಲಕ ಪ್ರಧಾನಿ ಮೋದಿ ನುಡಿದಂತೆ ನಡೆದಿದ್ದಾರೆ. ಬಿಜೆಪಿ ವಿಚಾರಧಾರೆಗಳ ಬಗ್ಗೆ ಜನರಲ್ಲಿ ನಂಬಿಕೆ ಹಾಗೂ ವಿಶ್ವಾಸ ಬಂದಿದೆ’ ಎಂದರು.

‘ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಹಾಗೂ ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

‘ನಾವೀಗ ಸಂಘಟನಾ ಪರ್ವದಲ್ಲಿ ಇದ್ದೇವೆ. ಪಕ್ಷದ ಕಾರ್ಯಕರ್ತರ ಶ್ರಮ ದಿಂದ ಚುನಾವಣೆ ಗೆಲ್ಲಲು ಗಮನ ಹರಿಸಲಾಗುವುದು. ಮೈಸೂರಲ್ಲಿ ಕ್ರಿಯಾಶೀಲರಾದ ಪ್ರತಾಪಸಿಂಹ ಇದ್ದಾರೆ. ಯಾವುದೇ ಸಂದರ್ಭದಲ್ಲಿ ಪ್ರಧಾನಿ ಬಳಿ ಹೋಗಿ ಮಾತ ನಾಡುವ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.

ಇದಕ್ಕೂ ಮೊದಲು ಚಾಮುಂಡಿ ಬೆಟ್ಟಕ್ಕೆ, ಸುತ್ತೂರು ಮಠಕ್ಕೆ ತೆರಳಿದರು. ಕೃಷ್ಣಧಾಮಕ್ಕೆ ತೆರಳಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪಸಿಂಹ, ಶಾಸಕ ಎಲ್‌.ನಾಗೇಂದ್ರ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ರಾಜ್ಯ ಘಟಕದ ಕಾರ್ಯದರ್ಶಿ ಎಂ.ರಾಜೇಂದ್ರ, ಮುಖಂಡರಾದ ಎಚ್‌.ವಿ.ರಾಜೀವ್‌, ಪ್ರಭಾಕರ್‌ ಸಿಂಧ್ಯ ಇದ್ದರು.


Spread the love

Exit mobile version