ಪಡುಬಿದ್ರೆ : ಕಿಂಡಿ ಅಣೆಕಟ್ಟಿನ ಮೇಲೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಯೋರ್ವಳು ಸ್ಲಾಬ್ ಕುಸಿದು ಮೃತಪಟ್ಟ ಘಟನೆ ಹೆಜಮಾಡಿಯ ಕೊಕ್ರಾಣಿ ಹಳೇಕುದ್ರು ಬಳಿ ರವಿವಾರ ಮಧ್ಯಾಹ್ನ ಸಂಭವಿಸಿದೆ. ಮೂಲ್ಕಿ ಕಿಲ್ಪಾಡಿ ಬೆಥನಿ ಶಾಲೆಯ 3ನೆ ತರಗತಿ ವಿದ್ಯಾರ್ಥಿನಿ, ಕೊಕ್ರಾಣಿ ಹಳೇ ಕುದ್ರು ನಿವಾಸಿಗಳಾದ ಹೆರಾಲ್ಡ್ ಪುರ್ಟಾಡೊ – ಲವಿನಾ ದಂಪತಿಯ ಪುತ್ರಿ ರಿಯಾ (7) ಮೃತಪಟ್ಟ ಬಾಲಕಿ. ಜೊತೆಗಿದ್ದ ಆಕೆಯ ಸಹೋದರ ಏರನ್ (10), ಸಹೋದರ ಸಂಬಂಧಿ ಆನಿಶ್(11) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಾಹ್ನ ತೋಟದ ತೆಂಗಿನಕಾಯಿ ಹೆಕ್ಕಲು ರಿಯಾ, ಏರನ್, ಆನಿಶ್ ಒಟ್ಟಾಗಿ ತೆರಳಿದ್ದರು. ತೋಟದ ಬಳಿ ಇದ್ದ ಕಿಂಡಿಅಣೆಕಟ್ಟು ದಾಟಿ ಹೋಗ ಬೇಕಾಗಿದ್ದರಿಂದ, ಒಟ್ಟಿಗೆ ಅಣೆಕಟ್ಟಿನ ಪ್ರಥಮ ಸ್ಲಾಬ್ ಮೇಲೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕುಸಿದುಬಿದ್ದಿತ್ತು. ಮೂವರೂ ಅಣೆಕಟ್ಟಿನ ಒಳಗೆ ಬಿದ್ದಿದ್ದು, ಸ್ಲಾಬ್ ತುಂಡು ರಿಯಾ ಮೇಲೆ ಬಿದ್ದಿದೆ. ಮತ್ತಿಬ್ಬರು ಜೋರಾಗಿ ಬೊಬ್ಬೆ ಹೊಡೆದ ಪರಿಣಾಮ ಸ್ಥಳೀಯರು ದೋಣಿ ಮೂಲಕ ಆಗಮಿಸಿ ಮೇಲಕೆತ್ತಿದರು. ಆದರೆ ತೀವ್ರ ಗಾಯಗೊಂಡ ರಿಯಾ ಮೃತಪಟ್ಟಿದ್ದಾಳೆ. 50ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕಿಂಡಿ ಅಣೆಕಟ್ಟನ್ನು ಸ್ಥಳೀಯರು ನಡೆದಾಡಲು ಬಳಸುತಿದ್ದರು.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.