Home Mangalorean News Kannada News ಕುಂದಾಪುರದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ – ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ

ಕುಂದಾಪುರದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ – ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ

Spread the love

ಕುಂದಾಪುರದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ – ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ

ಕುಂದಾಪುರ: ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಕುಂದಾಪುರದ ಗಾಂಧಿ ಮೈದಾನದಲ್ಲಿ ಸಂಭ್ರಮ ಸಡಗರದಿಂದ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಮಾತನಾಡಿದ ಸಹಾಯಕ ಆಯುಕ್ತ ರಾಜು ಕೆ ಅವರು ಸ್ವಾತಂತ್ರ್ಯಪೂರ್ವದಿಂದಲೇ ಭಾಷಾವಾರು ಪ್ರಾಂತ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಯುಯತ್ತಲೇ ಇತ್ತು. ಬ್ರಿಟೀಷರ ಆಡಳಿತಕ್ಕೊಳಪಟ್ಟಿದ್ದ ಮುಂಬೈ, ಮದ್ರಾಸ್ ಪ್ರಾಂತ್ಯ, ರಾಜಮನೆತನದ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಕೊಡಗು ಪ್ರಾಂತ್ಯಗಳನ್ನೊಳಗೊಂಡು ಏಕೀಕೃತ ಮೈಸೂರು ರಾಜ್ಯ 1956ರಲ್ಲಿ ಉದಯವಾಯಿತು. 1973ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ದೇಶದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯದ ಕೊಡುಗೆ ಅಪಾರ ಎಂದರು.

ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ. ಇಂಗ್ಲೀಷ್ ನಮಗೆ ಬೇಕು ನಿಜ. ಆದರೆ ಎಷ್ಟು ಬೇಕು? ಹೇಗೆ ಬೇಕು? ಎನ್ನುವುದನ್ನು ನಾವೇ ಯೋಜಿಸಿ ಅಳವಡಿಸಿಕೊಳ್ಳಬೇಕು. ಬದುಕು ಭಾಷೆಗಿಂತ ದೊಡ್ಡದು ಅಂತಾ ಹೇಳುತ್ತಾರೆ. ಆದರೆ ಭಾಷೆಯನ್ನು ಬಿಟ್ಟು ಬದುಕಿಲ್ಲ ಎನ್ನುವುದನ್ನು ಮರೆಯಬಾರದು. ಕನ್ನಡ ನಮ್ಮ ಆಡಳಿತ, ಶಿಕ್ಷಣದಲ್ಲಿ ಪ್ರಥಮ, ಪ್ರಧಾನ ಆಗಿರುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಕನ್ನಡ ಭಾಷೆಯ ಸಮಸ್ಯೆಗಳಿಗೂ ಕೊನೆಯಿರುವುದಿಲ್ಲ ಎಂದು ಅವರು ಹೇಳಿದರು.

ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಎಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಯುವಜನಾ ಸೇವಾ ಅಧಿಕಾರಿ ಕುಸುಮಾಕರ ಶೆಟ್ಟಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆಯ ಸದಸ್ಯರಾದ ದೇವಕಿ ಸಣ್ಣಯ್ಯ, ವಿ. ಪ್ರಭಾಕರ್, ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ, ಮಾಜಿನ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮತ್ತಿತರರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುಂದಾಪುರ ಪೋಲೀಸ್ ಠಾಣೆಯ ಉಪನಿರೀಕ್ಷರಾದ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸ್, ಹೋಮ್ ಗಾರ್ಡ್, ವಿವಿಧ ಶಾಲೆಯ ಎನ್ಸಿಸಿ, ಸೇವಾದಳ, ಸ್ಕೌಟ್ ಎಂಡ್ ಗೈಡ್ಸ್, ಹೋಲಿ ರೋಜರಿ ವಿದ್ಯಾರ್ಥಿಗಳ ಬ್ಯಾಂಡ್ಸಟ್ ವಾದ್ಯದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

ಹೋಲಿ ರೋಜರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


Spread the love

Exit mobile version