ಕುಂದಾಪುರದ ಅತೃಪ್ತ ಬಿಜೆಪಿ ನಾಯಕರಿಂದ ಪ್ರಮೋದ್ ಮಧ್ವರಾಜ್ ಅವರಿಗೆ ಬೆಂಬಲ ಘೋಷಣೆ!
ಕುಂದಾಪುರ: ಕುಂದಾಪುರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭ್ಯರ್ಥಿತನವನ್ನು ವಿರೋಧಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ದೂರವುಳಿದಿದ್ದ ಬಿಜೆಪಿಯ ಪ್ರಬಲ ಅತೃಪ್ತ ನಾಯಕರು ಕಾಂಗ್ರೆಸ್- ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರಿಗೆ ಬೆಂಬಲ ಘೋಷಿಸುವುದರ ಮೂಲಕ ಕುತೂಹಲಕ್ಕೆ ಕಾರಣವಾಗಿದ್ದಾರೆ.
ಗುರವಾರ ಕುಂದಾಪುರದಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಪ್ರಮೋದ್ ನಗರದ ಕಲಾಕ್ಷೇತ್ರ ಕಚೇರಿಗೆ ಭೇಟಿ ನೀಡಿ ಬಿಜೆಪಿ ಮುಖಂಡರಾದ ಕಿಶೋರ್ ಕುಮಾರ್ ಕುಂದಾಪುರ, ಮೆರ್ಡಿ ಸತೀಶ್ ಹೆಗ್ಡೆ, ಜಾನಕಿ ಬಿಲ್ಲವ, ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಳಪಟ್ಟ ಮಾಜಿ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಸೇರಿಂದತೆ ಹಲವು ಮಂದಿ ಬಳಿ ಮತಯಾಚನೆ ನಡೆಸಿದರು.
ಈ ವೇಳೆ ಮಾತನಾಡಿದ ಕಿಶೋರ್ ಕುಮಾರ್ ಅವರು ದೇಶದಲ್ಲಿ ಮೋದಿ ಪ್ರಧಾನಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಸೆಯಾಗಿದೆ ಆದರೆ ಉಡುಪಿ –ಚಿಕಮಗಳೂರು ಕ್ಷೇತ್ರಕ್ಕೆ ಸದಾ ಕೆಲಸ ಮಾಡುವ ಸಮರ್ಥ ಹಾಗೂ ಕ್ರಿಯಾಶೀಲ, ಜನರಿಗೆ ಸದಾ ಹತ್ತಿರದಲ್ಲಿ ಲಭಿಸುವ ಸಂಸದರು ಆಗತ್ಯವಿದೆ. ಆದ್ದರಿಂದ ಪ್ರಮೋದ್ ಅವರಿಗೆ ನಮ್ಮ ಬೆಂಬಲವಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆಯ ಪರವಾಗಿ ಮತಯಾಚನೆ ಮಾಡಿದ್ದೆ ಆದರೆ ಈ ಬಾರಿ ನನ್ನನ್ನು ಯಾರೂ ಕೂಡ ಸಂಪರ್ಕಿಸಿಲ್ಲ ಅಲ್ಲದೆ ಪಕ್ಷದ ಯಾವುದೇ ಚಟುವಟಿಕೆಗಳಿಗೂ ನಮ್ಮನ್ನು ಕರೆಯುತ್ತಿಲ್ಲ ಆದ್ದರಿಂದ ಮೈತ್ರಿ ಅಭ್ಯರ್ಥಿ ಪ್ರಮೋದ್ ಅವರು ಸ್ವತಃ ತನ್ನ ಬಳಿ ಬಂದು ಸಹಕಾರ ಕೇಳಿದ್ದಾರೆ ಆದ್ದರಿಂದ ವೈಯುಕ್ತಿವಾಗಿ ಬೆಂಬಲ ನೀಡಲಿದ್ದೇನೆ ಎಂದರು.
ಪಕ್ಷದಿಂದ ಉಚ್ಚಾಟಿತರಾಗಿರುವ ರಾಜೇಶ್ ಕಾವೇರಿ ಮಾತನಾಡಿ, ಕುಂದಾಪುರ ಬಿಜೆಪಿ ಓರ್ವ ವ್ಯಕ್ತಿ ಮೇಲೆ ನಿಂತಿರುವ ಪರಿಸ್ಥಿತಿ ಬಂದಿದ್ದು ಪಕ್ಷ ಕಟ್ಟಿದವರಿಗೆ, ಹಿರಿಯರಿಗೆ ಮಾನ್ಯತೆ ಇಲ್ಲದಂತಾಗಿದ್ದು ಇದರಿಂದ ಎಲ್ಲರಿಗೂ ನೋವಿದೆ ಎಂದರು.
ಕೆಲ ಹೊತ್ತು ಇವರೆಲ್ಲರ ಬಳಿಮಾತುಕತೆ ನಡೆಸಿದ ಪ್ರಮೋದ್ ಹೊರಡುವಾಗ ರಾಹುಲ್ ಗಾಂಧಿ ಪ್ರಧಾನಿಯಾಗೋದು ನನ್ನ ಆಸೆಯಾಗಿದೆ. ಓರ್ವ ಅಭ್ಯರ್ಥಿಯಾಗಿರುವ ಹಿನ್ನೆಲೆ ಎಲ್ಲರಂತೆ ಇವರ ಬಳಿಯೂ ಮತಯಾಚನೆ ಮಾಡಿ ಸಹಕಾರ ಕೇಳಿದ್ದೇನೆ. ಪಕ್ಷಕ್ಕೆ ಕರೆಯುವ ಯಾವುದೇ ಮಾತುಕತೆ ನಡೆದಿಲ್ಲ ಎಂದರು.
ಈ ಸಂದರ್ಭ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡ ರಾದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜೆಡಿಎಸ್ ಕುಂದಾಪುರ ಕ್ಷೇತ್ರಾದ್ಯಕ್ಷ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಬಿ. ಹೆರಿಯಣ್ಣ, ದೇವಕಿ ಸಣ್ಣಯ್ಯ, ಅಶೋಕ್ ಪೂಜಾರಿ ಬೀಜಾಡಿ, ಗಣೇಶ್, ಅರುಣ್ ಕಲ್ಗದ್ದೆ, ಹುಸೇನ್ ಹೈಕಾಡಿ ಮೊದಲಾದವರಿದ್ದರು.