ಕುಂದಾಪುರ: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳೀ ತಾಲೂಕಿನ ಮಂಜುನಾಥ (32) ಮತ್ತು ಯೋಗೀಶ್ (26) ಎಂದು ಗುರುತಿಸಲಾಗಿದೆ.
ಭಾನುವಾರ ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸದಾಶಿವ ಆರ್, ಗವರೋಜಿ ಇವರಿಗೆ ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಂದೂರು ಕಡೆಯಿಂದ ಒಂದು ಅಶೋಕ್ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಬೈಂದೂರು ಕಡೆಯಿಂದ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ನಿಲ್ಲಿಸಿದಾಗ ವಾಹನದಲ್ಲಿ ಮೂರು ಕಪ್ಪು ಬಣ್ಣದ ದನ ಹಾಗೂ ಒಂದು ಸಣ್ಣ ಕಂದು ಬಣ್ಣದ ಕರು ಇದ್ದು ವಾಹನದ ಹಿಂಬದಿ ಬಾಡಿಯಲ್ಲಿ ಹಗ್ಗದಿಂದ ಬಿಗಿದು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಗೂಡ್ಸ್ ವಾಹನದಲ್ಲಿದ್ದ ಇಬ್ಬರನ್ನು ವಶಪಡಿಸಿಕೊಂಡಾಗ ಇವರುಗಳು ಜಾನುವಾರುವನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಜಾನುವಾರುಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಮೇವು ಬಾಯಾರಿಕೆ ನೀಡದೇ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಜಾನುವಾರುಗಳ ಸಾಗಾಟಕ್ಕೆ ಯಾವುದೇ ಪರವಾನಿಗೆ ಇರುವ ಬಗ್ಗೆ ವಿಚಾರಿಸಲಾಗಿ ಪರವಾನಿಗೆ ಇಲ್ಲವಾಗಿ ತಿಳಿಸಿದ್ದಾರೆ.
ವಶಪಡಿಸಿಕೊಂಡ ವಾಹನದ ಮೌಲ್ಯ ರೂಪಾಯಿ 4,00,000/- ಹಾಗೂ ಜಾನುವಾರುಗಳ ಮೌಲ್ಯ 16,000/- ರೂಪಾಯಿ ಆಗಿರುತ್ತದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.