ಕುಂದಾಪುರ: ಅನ್ಯ ಕೋಮಿನ ಸ್ನೇಹಿತರ ಜೊತೆ ತೆರಳಿದ ಯುವತಿಗೆ ಹಲ್ಲೆ ಆರೋಪ: ವ್ಯಕ್ತಿಯ ಬಂಧನ
ಕುಂದಾಪುರ: ಎರಡು ಕೋಮಿನ ನಾಲ್ಕು ಮಂದಿ ಸ್ನೇಹಿತರು ಜೊತೆಯಾಗಿ ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವ ಸ್ನೇಹಿತರಲ್ಲಿ ಒರ್ವ ಯುವತಿಗೆ ಮಾನಕ್ಕೆ ಕುಂದುಂಟಾಗುವಂತೆ ನಿಂದಿಸಿ, ಅಶಾಂತಿ ಹರಡುವಂತೆ ಮಾಡಿ, ಬೈದು, ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದರ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿದ ಆರೋಪಿ ಮಹೇಶ ಎಂದು ಗುರುತಿಸಲಾಗಿದ್ದು ಆತನನ್ನು ಕುಂದಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಘಟನೆಯ ವಿವರ: ಎಪ್ರಿಲ್ 8 ರಂದು ಯುವತಿಯೋರ್ವಳು ತನ್ನ ಸ್ನೇಹಿತರೊಂದಿಗೆ ಉಡುಪಿಗೆ ಹೋಗಿ ವಾಪಾಸು ಮನೆಗೆ ಬರಲು ಉಡುಪಿ ಯಿಂದ ಖಾಸಗಿ ಬಸ್ ನಲ್ಲಿ ಹೊರಟು ಸಂಜೆ ಕುಂದಾಪುರಕ್ಕೆ ಬಂದು ಶಾಸ್ರ್ತೀ ಪಾರ್ಕ್ ನಲ್ಲಿ ಬಸ್ ನಿಂದ ಇಳಿದು ರಸ್ತೆ ದಾಟಿ, ಮುಂದಿನ ಪ್ರಯಾಣಕ್ಕಾಗಿ, ಬಸ್ ನಿಲ್ಲುವ ಬಸ್ ಸ್ಟ್ಯಾಂಡ್ ಕಡೆಗೆ ಹೋಗುತ್ತಾ ವೈಶಾಲಿ ಬಾರ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ಸಂಜೆ ಸುಮಾರು 06:45 ಗಂಟೆಗೆ ಆರೋಪಿ ಮಹೇಶ ಎಂಬಾತ ಯುವತಿಯ ಹೆಸರನ್ನು ಕೇಳಿ ನಂತರ ಅವಳ ಜೊತೆಯಲ್ಲಿದ್ದವರ ಹೆಸರನ್ನು ಕೇಳಿ ಎಲ್ಲರನ್ನು ಅವರುಗಳನ್ನು ಉದ್ದೇಶಿಸಿ, ನಿಮಗೆ ತಿರುಗಾಡಲು ಹಿಂದೂ ಹುಡುಗಿ ಬೇಕಾ ಎಂದು ಅವಾಚ್ಯ ಶಬ್ದದಿಂದ ಬೈದು ಒಬ್ಬ ಹುಡುಗನಿಗೆ ಕೈಯಿಂದ ಹೊಡೆದಿದ್ದು ,ಆಗ ಎಲ್ಲರೂ ಸೇರಿ ಹೊಡೆಯದಂತೆ ತಡೆದಾಗ ಆರೋಪಿಯು ಯುವತಿಯನ್ನು ಉದ್ದೇಶಿಸಿ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ಅಸಭ್ಯವಾಗಿ ಅಲ್ಲಿ ಸೇರಿದ್ದ ಸಾರ್ವಜನಿಕರ ಎದುರು ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿ ಬೈದು, ನೀನು ಇದೇ ರೀತಿ ಮುಸ್ಲಿಂ ಹುಡುಗರ ಜೊತೆಯಲ್ಲಿ ತಿರುಗಾಡಿದರೆ ಮುಂದಕ್ಕೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುತ್ತಾನೆ.
ಹಲ್ಲೆ ನಡೆಸಿದ ವ್ಯಕ್ತಿಯ ಹೆಸರನ್ನು ಅಲ್ಲಿದ್ದವರಲ್ಲಿ ವಿಚಾರಿಸಿ ಕೇಳಿದಾಗ ಮಹೇಶ ಎಂಬುದಾಗಿ ತಿಳಿಯಿತು, ಮಹೇಶನು ಸಾರ್ವಜನಿಕ ಸ್ಥಳದಲ್ಲಿ ನನ್ನ ಮಗಳ ಮಾನಕ್ಕೆ ಕುಂದುಂಟಾಗುವಂತೆ ನಿಂದಿಸಿ, ಅಶಾಂತಿ ಹರಡುವಂತೆ ಮಾಡಿ, ಬೈದು, ಹಲ್ಲೆ ನಡೆಸಿ ಬೆದರಿಕೆ ಹಾಕಿರುತ್ತಾನೆ ಎಂದು ಯುವತಿಯ ತಾಯಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 47/2025 ಕಲಂ. 126(2) 115(2) 352 351(2) 75 ,353(2) BNS ಕಲಂ: 75 JJ ACT ನಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿ ಮಹೇಶನನ್ನು ಎಪ್ರಿಲ್ 10 ರಂದು ಬೆಳಿಗ್ಗೆದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.
ಈ ಪ್ರಕರಣದಲ್ಲಿ ನೊಂದ ಎಲ್ಲರೂ ಅಪ್ರಾಪ್ತ ಮಕ್ಕಳಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಗೌರವಾನ್ವಿತ ಸುಪ್ರೀಂ ಕೋರ್ಟಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.