ಕುಂದಾಪುರ : ಎಸ್ಸಿ/ಎಸ್ಟಿ ಕಾಲನಿಗಳಲ್ಲಿ ಕೊರೊನಾ ಅರಿವು ಕಾರ್ಯಕ್ರಮ
ಕುಂದಾಪುರ: ಕೊರೊನಾ ವೈರಸ್ ತಡೆಗಟ್ಟಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಸ್ಸಿ/ಎಸ್ಟಿ ಕಾಲನಿಗಳಲ್ಲಿನ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಆಸ್ಪತ್ರೆ ಹಾಗೂ ಕುಂದಾಪುರ ನಗರ ಠಾಣೆಯ ವತಿಯಿಂದ ಬುಧವಾರ ಆಯೋಜಿಸಲಾಗಿತ್ತು.
ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಕಾಯ್ದುಕೊಂಡು ಜನರಲ್ಲಿ ಇದರ ಅಗತ್ಯತೆ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಆಸ್ಪತ್ರೆಯ ಡಾ|ನಾಗೇಶ್ ಹಾಗೂ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಅವರು ಕೊರೊನಾ ವೈರಸ್ ಸೋಂಕಿನ ಕುರಿತು ಕಾಲನಿಯ ಜನರು ಹಾಗೂ ಮಕ್ಕಳು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕುಂದಾಪುರ ತಾಲೂಕು ಆಸ್ಪತ್ರೆಯ ಡಾ|ನಾಗೇಶ್ ಕೊರೋನಾ ವೈರಸ್ನ ಕುರಿತು ಭಯ ಬೇಡ. ಆದರೆ ಎಚ್ಚರವಿರಲಿ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಾರಕ ರೋಗ ಬಾರದಂತೆ ತಡೆಯೋಣ. ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ, ಭೇದಿ ಇಂಥಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ಶುದ್ಧ ಕುಡಿಯುವ ನೀರಿನ ಜೊತೆಗೆ ಶುದ್ಧ ಆಹಾರ ಸೇವಿಸಿ. ಈ ಮೂಲಕ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಿ ಎಂದು ಕಾಲನಿಯ ಜನರಿಗೆ ಕರೆ ನೀಡಿದರು.
ಕೊರೊನಾ ವೈರಸ್ ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು ಈ ಸಮಯದಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲೇ ಇರುವಂತೆ ಹಾಗೂ ಅಗತ್ಯಕ್ಕೆ ಮನೆಯಿಂದ ಹೊರಬರುವಂತೆ ಕುಂದಾಪುರ ಠಾಣಾಧಿಕಾರಿಗಳು ಸೂಚನೆ ನೀಡಿದರು.
ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿ ಕೂಡ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಅವರ ನೇತೃತ್ವದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಸ್ಸಿ/ಎಸ್ಟಿ ಕಾಲನಿಗಳಲ್ಲಿನ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.