ಕುಂದಾಪುರ: ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ರಸ್ತೆ ಅಗೆತ- ಸ್ಥಳೀಯರಿಂದ ಕಾಮಗಾರಿಗೆ ತಡೆ

Spread the love

ಕುಂದಾಪುರ: ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ರಸ್ತೆ ಅಗೆತ- ಸ್ಥಳೀಯರಿಂದ ಕಾಮಗಾರಿಗೆ ತಡೆ

ಕುಂದಾಪುರ : ಕುಡಿಯುವ ನೀರಿನ ಪೈಪ್ ಪೈನ್ ಅಳವಡಿಕೆಗೆ ಇಡೀ ರಸ್ತೆಯನ್ನು ಅಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಸೋಮವಾರ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಗುಜ್ಜಾಡಿ ಗ್ರಾಮದ ನಾಯಕವಾಡಿ ಪರಿಸರದ ಮೇಲಂಡಿ ಎಂಬಲ್ಲಿ ಗ್ರಾಮ ಪಂಚಾಯತ್ನ 14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗೆ 71 ಸಾವಿರ ರೂ. ಮೀಸಲಿಡಲಾಗಿತ್ತು. ಮೇ 31ರೊಳಗೆ ಕಾಮಗಾರಿಯನ್ನು ಮುಗಿಸಬೇಕೆಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಭಾನುವಾರ ಗುತ್ತಿಗೆದಾರರು ಯಾರ ಗಮನಕ್ಕೂ ತಾರದೇ ಮೇಲಂಡಿ ಪರಿಸರದ ಏಕೈಕ ರಸ್ತೆಯನ್ನು ಅಗೆದು ಹಾಕಿ ಅಸಮಪರ್ಕವಾಗಿ ಪೈಪ್ ಅಳವಡಿಸಿದ್ದಾರೆ. ಪೈಪ್ ಲೈನ್ ಅಳವಡಿಸುವ ಕಾಮಗಾರಿ ಪ್ರಾರಂಭಿಸುವ ಮೊದಲು ಗ್ರಾಮ ಪಂಚಾಯತ್ ಗಮನಕ್ಕೆ ತರುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತಾದರೂ, ಗುತ್ತಿಗೆದಾರರು ಸ್ಥಳೀಯಾಡಳಿತದ ಗಮನಕ್ಕೆ ತಾರದೆ ಇಡೀ ರಸ್ತೆಯನ್ನು ಅಗೆದು ಹಾಕಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರರ ಅಸಮರ್ಪಕ ಕಾಮಗಾರಿಯನ್ನು ವಿರೋಧಿಸಿ ಭಾನುವಾರ ಸಂಜೆ ಸ್ಥಳೀಯರು ಕಾಮಗಾರಿಗೆ ತಡೆಡ್ಡಿದ್ದಾರೆ.

ಸುದ್ಧಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಮತ್ತು ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಸ್ಥಳೀಯರ ಮನವೊಲಿಸುವ ಪ್ರಯತ್ನ ನಡೆಸಿದ್ದರೂ ಸಫಲವಾಗಲಿಲ್ಲ. ಸೋಮವಾರ ಕೂಡ ಸ್ಥಳೀಯರು ಕಾಮಗಾರಿ ಮುಂದುವರಿಸದಂತೆ ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಗ್ರಾಪಂ ಕೂಡ ಗುತ್ತಿಗೆದಾರರ ಕ್ರಮವನ್ನು ಖಂಡಿಸಿದ್ದು, ರಸ್ತೆಯನ್ನು ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಥಳೀಯರು ಒಪ್ಪದಿರುವುದು ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ನಾಯಕವಾಡಿ ಪರಿಸರದ ಮೇಲಂಡಿ ಎಂಬಲ್ಲಿ ಸುಮಾರು 40ಕ್ಕೂ ಮಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರದ ಮಣ್ಣಿನ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಈವರೆಗೆ ಸ್ಪಂದನೆ ದೊರೆತಿಲ್ಲ. ಅನೇಕ ವಾಹನಗಳು, ನೂರಾರು ವಿದ್ಯಾರ್ಥಿಗಳು, ಜನರು ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಈ ರಸ್ತೆಯ ಮೇಲೆ ಮಳೆ ನೀರು ಹರಿದು ಹೋಗುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲ ಸಮೀಪಿಸುತ್ತಿರುವಾಗ ಇಡೀ ರಸ್ತೆಯನ್ನು ಅಗೆದು ಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಪೈಲ್ ಲೈನ್ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ ನಮ್ಮ ವಿರೋಧವಿಲ್ಲ. ಆದರೆ ಪೈಪ್ ಲೈನ್ ಅಳವಡಿಕೆಗೆ ಜೆಸಿಬಿ ಮೂಲಕ ರಸ್ತೆಯನ್ನು ಅಗೆದು ಹಾಕಿರುವುದು ಸರಿಯಲ್ಲ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ ಮತ್ತು ಮಳೆ ನೀರು ಸಮೀಪದ ಮನೆಗಳಿಗೆ ನುಗ್ಗುವ ಭೀತಿ ಇದೆ. ಆದ್ದರಿಂದ ಅಗೆದು ಹಾಕಿದ ರಸ್ತೆಯನ್ನು ಸುಸಜ್ಜಿತವಾಗಿ ಪುನರ್ ನಿರ್ಮಿಸಬೇಕು ಮತ್ತು ಮಳೆ ನೀರು ಈ ರಸ್ತೆಯ ಮೇಲೆ ಹರಿದು ಹೋಗದಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Spread the love