ಕುಂದಾಪುರ: ಕೊರೋನಾ ವಿರುದ್ಧ ಹೋರಾಟದಲ್ಲಿ ಭಾಗಿಯಾದವರಿಗೆ ಸಚಿವ ಕೋಟ ಅಭಿನಂದನೆ
ಕುಂದಾಪುರ: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪೊಲೀಸರು, ಎಲ್ಲಾ ಅಧಿಕಾರಿಗಳು ಸಮಯದ ಪರಿಮಿತಿ ಮೀರಿ ಕೊರೋನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದು, ಅವರಿಗೆ ಸರಕಾರ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಅವರು ಶನಿವಾರ ಕೊರೋನಾ ಕುರಿತಂತೆ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕೈಗೊಂಡ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ತಾ.ಪಂ. ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೃಷಿ, ತೋಟಗಾರಿಕಾ ಬೆಳೆಗಳ ಸಾಗಾಟಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ರೈತರಿಗೆ ಬೇಕಾಗುವ ಗೊಬ್ಬರ, ಬೀಜಗಳನ್ನು ನೀಡಲಾಗುತ್ತದೆ. ಕೃಷಿ ಕೂಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೃಷಿ ಚಟುವಟಿಕೆ ನಡೆಸಲು ಲಾಕ್ಡೌನ್ ಅಡ್ಡಿಯಾಗುವುದಿಲ್ಲ ಎಂದರು.
ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ವಿದೇಶಗಳಿಂದ ಬಂದವರು 603 ಮಂದಿಯಾದರೆ, ಮಾ.16 ರಿಂದ ಎ.16 ರವರೆಗೆ ಹೊರ ಜಿಲ್ಲೆಗಳಿಂದ ಬಂದವರು 31,357 ಮಂದಿ ಇದ್ದಾರೆ. ಇದರಲ್ಲಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಹೋಮ್ ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಸಭೆಯಲ್ಲಿ ಮಾಹಿತಿ ನೀಡಿದರು.
ಕುಂದಾಪುರದಲ್ಲಿ 612 ಮಂದಿ ಎಪಿಎಲ್ ಕಾರ್ಡ್ದಾರರು ಬಿಪಿಎಲ್ಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಸರಕಾರದ ಆದೇಶದಂತೆ ಮೇನಲ್ಲಿ ಪಡಿತರ ನೀಡಲಾಗುವುದು. ಈಗ ಅಕ್ಕಿ ದಾಸ್ತಾನಿಲ್ಲ. 1058 ಮಂದಿ ಕಾರ್ಡ್ ರಹಿತರಿದ್ದು, ಅವರಿಗೂ ಮುಂದಿನ ತಿಂಗಳಲ್ಲಿ ಪಡಿತರ ನೀಡಲು ಕ್ರಮಕೈಗೊಳ್ಳಲಾಗುವುದು. ಶೇ.95 ರಷ್ಟು ಪಡಿತರ ವಿತರಣೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಈವರೆಗೆ ನಿರ್ಬಂದವಿದ್ದ ಅನಾನಸು ಈಗ ಕೇರಳಕ್ಕೂ ಕಳುಹಿಸಲಾಗುತ್ತಿದೆ. ಕಲ್ಲಂಗಡಿ ಕೂಡ ಶಿವಮೊಗ್ಗ, ಕೇರಳಕ್ಕೆ ಹೋಗುತ್ತಿದೆ. ಉಪ್ಪುಂದದಲ್ಲಿರುವ ಹಾಪ್ಕಾಮ್ಸ್ನವರು ತರಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್ ಮಾಹಿತಿ ನೀಡಿದರು.
ಈಗ ನಾಡದೋಣಿ ಹೊರತುಪಡಿಸಿ ಕೈರಂಪಣಿ, ಮಾಟುಬಲೆ ದೋಣಿಗಳಿಗೆ ಅವಕಾಶ ನೀಡಿದರೆ ಹೇಗೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಇಲ್ಲಿ ಹೆಚ್ಚಿನ ಮೀನುಗಾರರು ಸೇರುವ ಸಂಭವ ಹಾಗೂ ಹೆಚ್ಚಿನ ಮೀನು ಸಿಕ್ಕರೆ, ಅದಕ್ಕೆ ಮಾರುಕಟ್ಟೆ ವ್ಯವಸ್ಥೆ ಹೇಗೆ ಎನ್ನುವ ಬಗ್ಗೆಯೂ ಗಮನಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಾಪಂ ಇಒ ಕೇಶವ ಶೆಟ್ಟಿಗಾರ್ ಇದ್ದರು. ಸಭೆಯಲ್ಲಿ ಆರೋಗ್ಯ, ಕೃಷಿ, ತೋಟಗಾರಿಕೆ, ಎಪಿಎಂಸಿ, ಕಾರ್ಮಿಕ, ಮೀನುಗಾರಿಕಾ ಇಲಾಖೆ, ಪೊಲೀಸ್ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.