ಕುಂದಾಪುರ: ಕರಾವಳಿ ಭಾಗದ ಪ್ರಸಿದ್ಧ ದೇವಸ್ಥಾನ ಕೊಲ್ಲೂರು ಮುಕಾಂಬಿಕೆ ಸನ್ನಿಧಿಯಲ್ಲಿ ಸರ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಭಕ್ತರು ಕಾಣಿಕೆಯಾಗಿ ನೀಡಿದ ಲಕ್ಷಾಂತರ ಮೌಲ್ಯದ ಸರವನ್ನು ದೇವಸ್ಥಾನದ ಸೇವಾ ಕೌಂಟರ್ನಲ್ಲಿ ರಶೀದಿ ಬರೆಯುತ್ತಿದ್ದ ಶಿವರಾಮ್ ಎಂಬ ಸಿಬ್ಬಂದಿ ಕಳ್ಳತನ ಮಾಡಿದ್ದಾನೆ ಎಂದು ಕೊಲ್ಲುರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಮುಕಾಂಬಿಕೆ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಈ ಕುರಿತು ದೂರು ನೀಡಿದ್ದಾರೆ. ಅಲ್ಲದೇ ದೇವಸ್ಥಾನದ ಇ.ಒ ಉಮಾ ಅವರು ಕೊಲ್ಲೂರು ಠಾಣೆಯಲ್ಲಿ ಸಿಬ್ಬಂದಿ ಶಿವರಾಮ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಕಳೆದ ಒಂದು ವಾರದಿಂದ ಸಿಬ್ಬಂದಿ ಶಿವರಾಮ್ ದೇವಸ್ಥಾನದ ಚಿನ್ನಾಭರಣವಿದ್ದ ಬೀರುವಿನ ಕೀಲಿಕೈ ಜತೆ ಪರಾರಿಯಾಗಿದ್ದಾನೆ. ಕಳವಾಗಿರುವುದು ಸುಮಾರು ನಾಲ್ಕು ಲಕ್ಷ ಮೌಲ್ಯದ ಚಿನ್ನದ ಸರ ಎಂಬುದು ತಿಳಿದು ಬಂದಿದ್ದು. ಶಿವರಾಮ್ ಅವರ ಪತ್ನಿ ಮನೆಯಲ್ಲಿದ್ದ ಚಿನ್ನದ ಸರವನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದಾರೆ. ಚಿನ್ನದ ಸರ ವಾಪಾಸಾಗಿರುವ ಹಿನ್ನೆಲೆಯಲ್ಲಿ ಇಒ ಕೇಸನ್ನು ವಾಪಾಸ್ ಪಡೆಯುವ ಸಾಧ್ಯತೆ ಇದೆ. ಶಿವರಾಮ್ ತಲೆಮರಿಸಿಕೊಂಡಿದ್ದಾನೆ. ಜಿಲ್ಲಾ ಪೊಲೀಸರ ತಂಡ ಈ ಕುರಿತು ತನಿಖೆ ಮುಂದುವರಿಸಿದೆ.