ಕುಂದಾಪುರ : ಗ್ರಾಮೀಣ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಾಗ ಅಭಿವೃದ್ಧಿ ಸಾಧ್ಯ : ಹಲಸಿನ ಹಬ್ಬಸಮಾರೋಪದಲ್ಲಿ ಅರುಣ್ ಶೆಟ್ಟಿ ಪಾದೂರು

Spread the love

ಕುಂದಾಪುರ : ಆಧುನಿಕ ಜಗತ್ತಿಗೆ ಸಮಾಜ ಹೊಂದಿಕೊಳ್ಳುತ್ತಿರುವಂತೆ ಗ್ರಾಮೀಣ ಕೃಷಿಯುತ್ಪನ್ನಗಳು ದೂರವಾಗುತ್ತಿವೆ. ಅತೀ ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುವ ಮತ್ತು ಔಷಧೀಯ ಸತ್ವವಿರುವ ಹಲಸಿನ ಕೃಷಿಯೂ ಅವನತಿಯತ್ತ ಸಾಗುತ್ತಿದೆ. ಜಾಹೀರಾತುಗಳಿಗೆ ಮಾರುಹೋಗುವ ಮೂಲಕ ಗ್ರಾಮೀಣ ಉತ್ಪನ್ನಗಳನ್ನು ಮರೆಯುತ್ತಿದ್ದೇವೆ. ಇಂತಹಾ ಹಬ್ಬಗಳಲ್ಲಿ ಪ್ರತಿಯೊಂದು ಗ್ರಾಮೀಣ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಾಗ ಗ್ರಾಮೀಣ ಕೃಷಿಯಲ್ಲಿ ಅಭಿವೃದ್ಧಿ ಕಾಣಲು ಸಆಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಹೇಳಿದರು.

krishi halasu 1 krishi halasu

ಕೃಷಿ  ಮತ್ತು  ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ,  ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಕುಂದಾಪುರ, ಉಡುಪಿ, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ, ಉಡುಪಿ ಮತ್ತು ಭಾರತೀಯ ಕಿಸಾನ್ ಸಂಘ, ಉಡುಪಿ ಜಿಲ್ಲೆ  ಇವರ ಸಂಯುಕ್ತಾಶ್ರಯದಲ್ಲಿ ಕುಂದಾಪುರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜೂ.13 ಮತ್ತು 14ರಂದು ಎರಡು ದಿನಗಳ ಕಾಲ ನಡೆದ ‘ರಾಜ್ಯ ಮಟ್ಟದ ಹಲಸಿನ ಹಬ್ಬ 2015’ರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಕೇರಳ ರಾಜ್ಯದಲ್ಲಿ ಇಂದಿಗೂ ಯಾವುದೇ ಶುಭ ಸಮಾರಂಭದಲ್ಲಿ ಹಲಸಿನ ಉತ್ಪನ್ನಗಳ ಬಳಕೆಯಿದೆ. ಇದು ನಮ್ಮ ಸಂಸ್ಕøತಿಯ ಪ್ರತಿಪಾದನೆಯ ಸಂಕೇತವೂ ಹೌದು ಎಂದು ಹೇಳಿದ ಅವರು ನಮ್ಮ ರಾಜ್ಯದಲ್ಲಿಯೂ ಗ್ರಾಮೀಣ ಕೃಷಿ ಹಾಗೂ ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡಬೇಕು. ಸರ್ಕಾರವೂ ಇಂತಹಾ ಕೃಷಿಯನ್ನು ಉದ್ಯಮವನ್ನಾಗಿ ಬೆಳೆಸಲು ವಿಶೇಷ ರಿಯಾಯಿತಿ ಹಾಗೂ ತಾಂತ್ರಿಕತೆಯ ಬಗ್ಗೆ ಮಾಹಿತಿ ಕಾರ್ಯಾಗಾರಗಳನ್ನು ನಡೆಸುವಂತಾಗಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಹಲಸಿನ ಹಣ್ಣನ್ನು ಈಗೀಗ ಕೇವಲ ತಿನ್ನುವುದಕ್ಕೆ ಮಾತ್ರ ಬಳಸುತ್ತಾರೆ. ಅದರಿಂದ ತಯಾರಿಸಬಹುದಾದ ಆಹಾರ ಉತ್ಪನ್ನಗಳ ಬಗ್ಗೆಯೂ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಹಲಸಿನ ಉತ್ಪನ್ನಗಳನ್ನು ವಾಣಿಜ್ಯ ಉದ್ದಿಮೆಯನ್ನಾಘಿ ಬೆಳೆಸುವವರಿಗೆ ರಾಷ್ಟ್ರೀಯ ತೋಟಗಾರಿಕಾ ಇಲಾಖೆಯಿಂದ ಶೇ.10ರ ಸಬ್ಸಿಡಿಯೂ ದೊರಕುತ್ತದೆ. ಸರ್ಕಾರದ ಸಹಾಯಧನ ಅತ್ಯಲ್ಪವಾದರೂ ಉತ್ಪನ್ನಗಳನ್ನು ಉದ್ದಿಮೆಯಾಗಿ ಬೆಳೆಸಿದರೆ ಅಧಿಕ ಆದಾಯವನ್ನೂ ತರಬಹುದು ಎಂದು ಹಲಸು ಪ್ರಿಯರಿಗೆ ಕಿವಿಮಾತು ಹೇಳಿದರು.

ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಹಲಸಿನ ಹಣ್ಣು, ಬೀಜ, ಸೊಳೆ, ಹಪ್ಪಳ, ಉಪ್ಪಿಕಾಯಿ, ಗುಜ್ಜೆಯ ಪಲ್ಯ, ಸಂಡಿಗೆ, ಕಡುಬು, ಮುಳ್ಕ, ಇಡ್ಲಿ, ದೋಸೆ, ಪಾಯಸ ಮಾತ್ರವಲ್ಲದೇ ಸೌತೆ ಮೊದಲಾದ ತರಕಾರಿಗಳಿಗೆ ಹಲಸಿನ ಬೀಜದ ಸಾಥ್ ಈಗಲೂ ಬಾಯಲ್ಲಿ ನೀರೂರಿಸುವಂತಿದೆ. ಆಧರೆ ಈಗ ಅದೆಲ್ಲವೂ ಅಪರೂಪವಾಗಿದೆ. ಈ ನಿಟ್ಟಿನಲ್ಲಿ ಇಂತಹಾ ಮೇಳ ಮತ್ತು ಪ್ರದರ್ಶನಗಳ ಮೂಲಕ ಹಳೆಯದನ್ನು ನೆನಪಿಸುತ್ತಾ, ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದೊಂದು ಹಲಸಿನ ಗಿಡ ನೆಡುವ ಮೂಲಕ ಮನೆಗೊಂದು ಹಲಸು ಅಭಿಯಾಣ ಆರಂಭಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಎರಡು ದಿನಗಳ ಕಾಲ ನಡೆದ ಮೇಳದಲ್ಲಿ ಉತ್ತಮ ಹಲಸಿನ ಉತ್ಪನ್ನಗಳ ಪ್ರದರ್ಶನದಲ್ಲಿ ಕಿಶೋರ್ ಕೂಡಗಿಯವರು ಪ್ರಥಮ, ಉತ್ತಮ ಮಾರಾಟ ಮಳಿಗೆಯಲ್ಲಿ ನ್ಯಾಚುರಲ್ ಫ್ರೂಟ್ ಜ್ಯೂಸಸ್‍ನ ದುರ್ಗಾದೇವಿ ಪ್ರಥಮ, ಉತ್ತಮ ಬೇಯಿಸಿದ ಹಲಸಿನ ಪದಾರ್ಥಕ್ಕೆ ಸ್ವಾತಿ ಶೇಟ್ ಪ್ರಥಮ ಮತ್ತು ಪ್ರಸಾದ್ ಸಾಣೂರು ದ್ವಿತೀಯ, ಉತ್ತಮ ಹಲಸಿನ ಹಣ್ಣುಗಳ ಪ್ರದರ್ಶನದಲ್ಲಿ ತೂಬ್ಗೆರೆ ಹಲಸು ಬೆಳೆಗಾರರ ಸಂಘ ಪ್ರಥಮ, ಉತ್ತಮ ನರ್ಸರಿ ಪ್ರದರ್ಶನದಲ್ಲಿ ರಪ್ಪನ್‍ಪೇಟೆಯ ಅಂಕುರ್ ನರ್ಸರಿ ಪ್ರಥಮ, ಉತ್ತಮ ಹಲಸಿನ ಮಾದರಿಯ ಪ್ರದರ್ಶನದಲ್ಲಿ ಹಾಲಾಡಿ ವಲಯ ಹಾಗೂ ಚಿತ್ತೂರು ವಲಯಗಳು ಬಹುಮಾನ ಪಡೆದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಎಂ. ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಖಂಬದ ಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಭಾರತೀಯ ಕಿಸಾನ್‍ಸಂಘದ ಉಡುಪಿ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ|ಎಸ್.ಯು.ಪಾಟೀಲ್, ನಿವೃತ್ತ ತೋಟಗಾರಿಕಾ ಅಧಿಕಾರಿ ಕುಚೇಲಯ್ಯ, ಸುಧೀರ್ ಕಾಮತ್, ಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕಿ ಡಾ| ಜಯಲಕ್ಷ್ಮೀ ನಾರಾಯಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರದ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ವಂದಿಸಿದರು. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ತರಬೇತಿ ಸಹಾಯಕ ಸಂಜೀವ ಕ್ಯಾತಪ್ಪನವರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯ ಅಧಿಕಾರಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು.


Spread the love